ಪರಶ್ಶಿನಿಕಡವ್ ಮುತ್ತಪ್ಪನ್ ಸನ್ನಿಧಿಯಲ್ಲಿ ದೈವಕ್ಕೆ ತಲೆಬಾಗಿದ ಸೌದಿ ಅರೇಬಿಯಾ ಪ್ರಜೆ

by Narayan Chambaltimar

ಕಣಿಪುರ ಸುದ್ದಿಜಾಲ

ಅತ್ಯುತ್ತರ ಕೇರಳದ ಪ್ರಸಿದ್ಧವಾದ ಪರಶ್ಶಿನಿಕಡವು ಮುತ್ತಪ್ಪನ್ ಕ್ಷೇತ್ರಕ್ಕೆ ಚೌತಿಯ ದಿನದಂದೇ ಸೌದಿ ಅರೇಬಿಯಾದ ಪ್ರಜೆಯೊಬ್ಬರು ಭಕ್ತರಾಗಿ ಬಂದು ದೈವದರ್ಶನದಿಂದ ಅನುಗ್ರಹೀತರಾಗಿ ಅಚ್ಚರಿ ಮೂಡಿಸಿದರು.
ಸೌದಿ ಅರೇಬಿಯಾದ ಸಾಂಪ್ರದಾಯಿಕ ಉಡುಪಿನಲ್ಲೇ ಬಂದ ಸೈಯ್ದ್ ಮುಹಮ್ಮದ್ ಅಯಿಲಲ್ಲಾಹಿ ಅಲ್ ನಖ್ವಿ ಎಂಬವರು ಪರಶ್ಶಿನಿಕಡವಿನ ಕುರಿತು ಕಣ್ಣೂರು ಮೂಲದ ತನ್ನ ಗೆಳೆಯನಿಂದಲೇ ತಿಳಿದು ಜತೆಯಾಗಿ ಇಲ್ಲಿಗಾಗಮಿಸಿದರು.


ಕಣ್ಣೂರು ಕೀಚೇರಿ ನಿವಾಸಿ ರವೀಂದ್ರನ್ ಸೌದಿ ಅರೇಬಿಯದಲ್ಲಿ ಉದ್ಯೋಗಿ. ಅವರು ಊರಿಗೆ ಮರಳುವಾಗ ಅವರ ಜತೆ ಕಣ್ಣೂರು ನೋಡಲೆಂದು ಪ್ರವಾಸಿಗರಾಗಿ ಬಂದ ಸೌದಿಯ ಪ್ರಜೆ ಪರಶ್ಶಿನಿಕಡವಿನ ಮುತ್ತಪ್ಪನ್ ದೈವದ ಬಗ್ಗೆ ತಿಳಿದಾಗ ಕುತೂಹಲಿಯಾದರು. ಅಲ್ಲಿಗೆ ಹೋಗಬೇಕು, ನೋಡಬೇಕೆಂಬ ಬಯಕೆ ಪ್ರಕಟಿಸಿದರು.
ಇದರಂತೆ ಸೆ.7ರಂದು ರವೀಂದ್ರನ್ ಜತೆಯಾಗಿ ಅವರು ಪರಶ್ಶಿನಿ ಕಡವಿಗೆ ಬಂದರು.

ಕ್ಷೇತ್ರ ಆಚಾರಗಳನ್ನು ಪಾಲಿಸಿ ಇಲ್ಲಿನ ತಿರುವಪ್ಪನ್, ಮುತ್ತಪ್ಪನ್ ದೈವಗಳನ್ನು ಅವರು ದರ್ಶಿಸಿದರು. ನಿತ್ಯವೂ ದೈವಕೋಲ ಕಟ್ಟಿಯಾಡುವುದು ಇಲ್ಲಿನ ವಾಡಿಕೆ. ಇದೇ ಮೊದಲ ಬಾರಿಗೆ ಮಲಬಾರಿನ ದೈವದ ಮುಂದೆ ಪ್ರಸನ್ನಚಿತ್ತರಾಗಿ ನಿಂತ ಸೌದಿ ಪ್ರಜೆಯನ್ನು ಕೈಹಿಡಿದು ಅಭಯವಾಕ್ಯದ ಭರವಸೆಯನ್ನಿತ್ತ ದೈವ ಮೊದಲಿಗೆ ವಿಶೇಷವನ್ನರುಹಿತು. ಬಳಿಕ ಕ್ಷೇಮ ವಿಚಾರಿಸಿತು. ಜತೆಗೆ ತನ್ನ ಶಿರದಿಂದ ತುಳಸಿ, ಕಿಸ್ಕಾರಗಳನ್ನು ತೆಗೆದು ಸೌದಿ ಪ್ರಜೆಯ ತಲೆಗಿಟ್ಟು “ಬಯಸಿದ ಕಾರ್ಯ ನಡೆಯುವುದೆಂದು” ಹರಸಿತು.
ಸೌದಿ ಅರೇಬಿಯಾದ ಪ್ರಜೆಯೊಬ್ಬರನ್ನು ಅಲ್ಲಿನ ಉಡುಪಿನಲ್ಲಿ ಮುತ್ತಪ್ಪನ್ ಮಡಪ್ಪುರ( ದೈವಸ್ಥಾನ)ದಲ್ಲಿ ಕಂಡಾಗ ನೆರೆದಿದ್ದ ಇತರ ಭಕ್ತರಿಗೆ ಇದೊಂದು ವಿಸ್ಮಯಕರ ದೃಶ್ಯವಾಯಿತು. ಜನರು ತೆಗೆದ ಈ ಭೇಟಿಯ ವೀಡಿಯೋಗಳು ಈಗ ಜಾಲತಾಣದಲ್ಲಿ ವ್ಯಾಪಕ ಹರಿದಾಡುತ್ತಿವೆ.

ಕೇರಳದ ಕಣ್ಣೂರು ಜಿಲ್ಲೆಯ ಪರಶ್ಶಿನಿಕಡವ್ ದೈವಸ್ಥಾನ ಸಾಮರಸ್ಯದ ಕ್ಷೇತ್ರವೆಂದೇ ಜನಪ್ರಿಯ. ಅವೈದಿಕ ಆಚಾರ ಪದ್ಧತಿಯ ಅನುಷ್ಠಾನಗಳು ಇಲ್ಲಿನ ವೈಶಿಷ್ಠ್ಯ. ಜನಪದ ದೈವವಾಗಿರುವ ಕಾರಣ ದೈವಗಳಿಗೆ ಮೀನು, ಮಾಂಸ, ಶೇಂದಿ ಒದಗಿಸುವ ಆರಾಧನೆ ಇಲ್ಲಿನ ವಿಶೇಷತೆ. ಇದುವೇ ಭಕ್ತರಿಗೆ ಪ್ರಸಾದವೂ ಹೌದು. ಕಣ್ಣೂರು ಸಮೀಪದ ತಳಿಪರಂಬ ಎಂಬ ಊರಿಂದ 10ಕೀ.ಮೀ. ದೂರದಲ್ಲಿ, ಪಶ್ಚಿಮಘಟ್ಟದ ತಪ್ಪಲಿನ ವಳಪಟ್ಟಣಂ ನದೀ ತೀರದಲ್ಲಿ ಈ ದೈವಸ್ಥಾನವಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00