ಕಣಿಪುರ ಸುದ್ದಿಜಾಲ
ಬೆಂಗಳೂರು (ಸೆ.6)
ಗಡಿನಾಡು ಕಾಸರಗೋಡು ಭೂಭಾಗ ದಕ್ಷಿಣ ಕನ್ನಡ ಸಹಿತ ಕರ್ನಾಟಕದ ಜತೆ ಅವಿನಾಭಾವ ಬಂಧುತ್ವ ಹೊಂದಿದ್ದು, ಈ ನಡುವಣ ಕರ್ನಾಟಕ ಸಾರಿಗೆ ಸಮಸ್ಯೆಯನ್ನು ಕ್ಷಿಪ್ರ ಪರಿಹರಿಸಬೇಕೆಂದು ಬೆಂಗಳೂರಿನ ಗಡಿನಾಡ ಸಂಘಟನೆ ವಿಕಾಸ ಟ್ರಸ್ಟ್ ಸಾರಿಗೆ ಸಚಿವರ ಜತೆ ಮಾತುಕತೆ ನಡೆಸಿ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನ ಭೇಟಿಯಾದ ವಿಕಾಸ ಟ್ರಸ್ಟ್ ಅಧ್ಯಕ್ಷ ರವಿನಾರಾಯಣ ಗುಣಾಜೆ ಅವರು ಕಾಸರಗೋಡು – ಮಂಗಳೂರು ನಡುವಣ ಸಾರಿಗೆ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದು ಲಿಖಿತ
ಮನವಿ ಸಲ್ಲಿಸಿ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಕಾಸರಗೋಡು -ಮಂಗಳೂರು ನಡುವಣ ಜನತೆಗೆ ಅಂತರಾಜ್ಯದ ಅವಿನಾಭಾವ ಸಂಬಂಧ ಇಂದು ನಿನ್ನೆಯದ್ದೇನಲ್ಲ. ಈ ನಡುವಣ ಕೇವಲ 50 ಕಿ.ಮೀ. ದೂರಕ್ಕೆ 35ರಿಂದ 40ರಷ್ಟು ನಿಲುಗಡೆ ನೀಡುವ ಬಸ್ಸುಗಳು ಸಂಚಾರಕ್ಕೆ ಒಂದೂವರೆಯಿಂದ ಎರಡು ತಾಸುಗಳ ತನಕ ವ್ಯಯಿಸುತ್ತದೆ. ಇದು ರಾಜ್ಯದಲ್ಲೇ ಸಾರಿಗೆ ಬಸ್ಸಿಗೆ ಅತ್ಯಧಿಕ ಜನದಟ್ಟಣೆಯ, ಆದಾಯದ ರೂಟಾಗಿದೆ.
ಆದರೆ ಈ ರೂಟಿನಲ್ಲಿ ಅತ್ಯಧಿಕ ನಿಲುಗಡೆ ಮತ್ತು ಅತ್ಯಂತ ನಿಧಾನಗತಿಯ ಬಸ್ಸಿನ ಸಂಚಾರ ಸಾರ್ವಜನಿಕರ ನಿತ್ಯ ದುಡಿಮೆಯ ಬದುಕನ್ನೇ ಕಾಡುತ್ತದೆನ್ನುವುದು ವಾಸ್ತವ. ಈ ಹಿನ್ನೆಲೆಯಲ್ಲಿ ಆರ್ಡಿನರಿ ಬಸ್ ಗಳ ಜತೆಯಲ್ಲೇ ವೇಗದೂತ ಬಸ್ ಗಳು ಈ ರೂಟಿನಲ್ಲಿ ಅತ್ಯಗತ್ಯ ಎಂದು ವಿಕಾಸ ಟ್ರಸ್ಟ್ ಲಿಖಿತ ಮನವಿಯಲ್ಲಿ ಸಚಿವರನ್ನು ಒತ್ತಾಯಿಸಿದೆ.
ವಿಕಾಸ ಟ್ರಸ್ಟ್ ಬೇಡಿಕೆಗಳು
————————-
1.ಕಾಸರಗೋಡು – ಮಂಗಳೂರು ನಡುವೆ ಸಂಚರಿಸುವ ಬಸ್ಸುಗಳ ಪೈಕಿ ಅರ್ಧಾಂಶವನ್ನಾದರೂ ನಿಯಮಿತ ನಿಲುಗಡೆಯ ವೇಗದೂತವನ್ನಾಗಿ ಪರಿವರ್ತಿಸಬೇಕು.
2.ಕಾಸರಗೋಡು – ಮಂಗಳೂರು ನಡುವಣ ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಉಭಯ ರಾಜ್ಯ ಸಾರಿಗೆ ಸಂಸ್ಥೆಗಳು ಒಪ್ಪಂದ ನಡೆಸಿ, ನಿತ್ಯ ಪ್ರಯಾಣಿಕರಿಗೆ ಜಂಟಿ ಮಾಸಿಕ ಪಾಸ್ ಒದಗಿಸಬೇಕು.
3. ಕರ್ನಾಟಕ ಬಸ್ಸುಗಳಿಗೆ ಹೈಡ್ರಾಲಿಕ್ ಬಾಗಿಲು ಏರ್ಪಡಿಸಬೇಕು ಮತ್ತು ಈ ಮೊದಲು ಸಂಚಾರವಿದ್ದು, ಕಾರಣ ರಹಿತ ಸಂಚಾರ ಸ್ಥಗಿತ ಗೊಳಿಸಿದ ಅಡೂರು-ಮಂಗಳೂರು, ಪುತ್ತೂರು-ಕುಂಬಳೆ, ಧರ್ಮತ್ತಡ್ಕ- ಮಂಗಳೂರು, ಬಾಯಾರು-ಮಂಗಳೂರು ರೂಟಿನ ಬಸ್ಸುಗಳನ್ನು ಮತ್ತೆ ಪುನರಾರಂಭಿಸಬೇಕು.
ಸಾರಿಗೆ ಸಚಿವರಿಗಿತ್ತ ಮನವಿಯನ್ನು ಪರಿಗಣಿಸಿದ ಅವರು ಇದನ್ನು ಸಾರಿಗೆ ಸಂಸ್ಥೆಯ ಆಡಳಿತ ನಿರ್ದೇಶಕರಿಗೆ ಹಸ್ತಾಂತರಿಸಿದ್ದಾರೆ. ಈ ಕುರಿತು ಅಧ್ಯಯನ ನಡೆಸಿ ಕ್ರಮ ಕೈಗೊಳ್ಳುವಂತೆಯೂ ಆಡಳಿತ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಕರ್ನಾಟಕ ಸಾರಿಗೆ ಬಸ್ ಗಳು ಮಂಗಳೂರು, ಪುತ್ತೂರು, ಸುಳ್ಯ ಡಿಪೋಗಳಿಂದ ಹೆಚ್ಚುವರಿ ವೇಗದೂತ ಸಹಿತ ಕಾಸರಗೋಡು ಜಿಲ್ಲೆಯ ಮೂಲಕ ಕರ್ನಾಟಕದ ವಿವಿಧ ಕಡೆಗೆ ಬಸ್ ಸಂಚಾರ ಆರಂಭಿಸಿದರೆ ಗಡಿನಾಡಿನ ಚಿತ್ರಣವೇ ಬದಲಾಗಲಿದೆ.