ಕಣಿಪುರ ಸುದ್ದಿಜಾಲ
ಒಂದೂರಿನ ಆಸ್ತಿಕ ಜನರನ್ನೆಲ್ಲಾ ಜನಾರ್ಧನನೊಡನೆ ಜೋಡಿಸುವ ವಿಶಿಷ್ಟ ಸಂಕಲ್ಪದೊಂದಿಗೆ ಗಡಿನಾಡು ಕಾಸರಗೋಡಿನ ಗ್ರಾಮೀಣ ಪ್ರದೇಶ ಏತಡ್ಕದ ಪುಟ್ಟ ದೇವಾಲಯ ಶ್ರೀ ಸದಾಶಿವ ಕ್ಷೇತ್ರದ ಬ್ರಹ್ಮಕಲಶಕ್ಕೆ ಶಿವಾರ್ಪಣ ಅಭಿಯಾನ ಆರಂಭಗೊಂಡಿದೆ.
2025ರ ಫೆ.11ರಿಂದ 16ರ ತನಕ ಏತಡ್ಕ ಸದಾಶಿವ ದೇವಾಲಯದ ಬ್ರಹ್ಮಕಲಶ ನಡೆಯಲಿದೆ. ಇದಕ್ಕಾಗಿ ಈ ನಾಡಿನ ಜನರನ್ನೆಲ್ಲ ಜನಾರ್ಧನನೊಡನೆ ಜೋಡಿಸಿ ಸ್ವಾವಲಂಬಿತನದ ಮಾದರಿ ಬ್ರಹ್ಮಕಲಶಕ್ಕಾಗಿ ಇಟ್ಟ ಹೆಜ್ಜೆಯೇ ಶಿವಾರ್ಪಣೆ
ಏತಡ್ಕ ಸದಾಶಿವ ದೇವಸ್ಥಾನ ಕುಗ್ರಾಮದಲ್ಲಿರುವ ಪುಟ್ಟ ಕ್ಷೇತ್ರ. ಆದರೆ ವಿಶಿಷ್ಟ ಆಚಾರನುಷ್ಠಾನದ ವೈಶಿಷ್ಠ್ಯಗಳಿಂದ ದೇಶದಲ್ಲೇ ಗಮನ ಸೆಳೆದ ಕ್ಷೇತ್ರವೂ ಹೌದು. ಹಳ್ಳಿಗಾಡೊಳಗಿನ ಒಂದು ಪುಟ್ಟ ದೇಗುಲ ಈಗ ಬ್ರಹ್ಮ ಕಲಶಕ್ಕಣಿಯಾಗುತ್ತಿದೆ. ಅದು ಏತಡ್ಕ ಪರಿಸರದ ಜನರನ್ನೆಲ್ಲ ಒಂದುಗೂಡಿಸಿ ಕಾಯಕವನ್ನೇ ಶಿವಾರ್ಪಣ ಮಾಡಿಸುತ್ತಿದೆ. ಒಂದು ಗ್ರಾಮ ಗ್ರಾಮದೇವರ ಬ್ರಹ್ಮಕಲಶಕ್ಕೆ ಹೀಗೆ ಜತೆಗೂಡಿ ಒಂದಾಗುವುದೇ ವೈಶಿಷ್ಠ್ಯ.
ಏನಿದು ನಾಡ ಜನತೆಯ ಶಿವಾರ್ಪಣ?
——————–
ಅದ್ದೂರಿ, ಆಡಂಬರಕ್ಕಿಂತ ಭಿನ್ನವಾಗಿ ಊರಿನ ಜನರೆಲ್ಲರ ಬದುಕಿಗೆ ಸ್ಪೂರ್ತಿಯಾಗುವಂತೆ ಬ್ರಹ್ಮಕಲಶ ನಡೆಯಬೇಕು. ಅದಕ್ಕಾಗಿ ಪ್ರತಿ ಮನೆಯವರೂ ಭಾಗಿಯಾಗಬೇಕು. ಮೊದಲಿಗೆ ಕಾರ್ಯಕರ್ತರು ನೀಡುವ ಪುಸ್ತಕದಲ್ಲಿ ಓಂ ನಮಃ ಶಿವಾಯ ಬರೆಯುವಲ್ಲಿಂದ ಆರಂಭ. 2025 ಜ.11ರ ಮೊದಲು ಯಥಾನುಶಕ್ತಿ ಕಾಣಿಕೆ ಸಹಿತ ಪುಸ್ತಕ ದೇಗುಲ ತಲುಪಬೇಕು. ಬ್ರಹ್ಮಕಲಶದಲ್ಲಿ ಸಾಮೂಹಿಕ ಪುಸ್ತಕ ಪೂಜೆ ನಡೆಸಿ ಅವರವರಿಗಿದು ಪ್ರಸಾದವಾಗಿ ಮರಳುತ್ತದೆ.
ಮಡಲು, ಅಲಂಕಾರ ಮಾಲೆ
————-
ಬ್ರಹ್ಮಕಲಶದ ವೇಳೆ ದೇಗುಲವನ್ನು ವರ್ಣರಂಜಿತ ಬಟ್ಟೆಗಳಿಂದಲೇ ಅಲಂಕರಿಸಲಾಗುವುದು. ಇದಕ್ಕಾಗಿ ಜನರೇ ಬಟ್ಟೆಯ ಅಲಂಕಾರ ಮಾಲೆ ಮಾಡಬೇಕು. ಬಟ್ಟೆಯನ್ನು ಸಮಿತಿ ಒದಗಿಸುತ್ತದೆ. ಜನರದನ್ನು ಮಾಲೆಯನ್ನಾಗಿ ಪೋಣಿಸಬೇಕು.
ಹಾಗೆಯೇ ಸಂಪೂರ್ಣ ಮಡಲಿನದೇ ಚಪ್ಪರ. ಇದಕ್ಕಾಗಿ ಪ್ರತಿಮನೆಯಿಂದ 10 ಮಡಲು ಹೆಣೆದು ಕೊಡಬೇಕು. ಹೆಣೆಯಲು ಗೊತ್ತಿಲ್ಲದವರಿಗೆ ದೇವಳದಲ್ಲಿ ಪ್ರಾತ್ಯಕ್ಷಿಕೆ ಇದೆ.
ಜನರಿಂದಲೇ ಪ್ರಸಾದ ಚೀಲ
———————
ಬ್ರಹ್ಮ ಕಲಶಕ್ಕೆ ಸಾವಿರಾರು ಪ್ರಸಾದ ಚೀಲ ಅಗತ್ಯ. ಇದನ್ನೂ ಜನರಿಂದಲೇ ಒದಗಿಸುವುದು ಉದ್ದೇಶ. ಬಟ್ಟೆ ದೇವಳ ವತಿಯಿಂದ. ಜನರು ಹೊಲಿದು ನೀಡಿದರಾಯಿತು. ಬಟ್ಟೆಯ ಚೀಲ ಮುಂದಕ್ಕೆ ಮನೆ ಬಳಕೆಗೂ ಉಪಯುಕ್ತ.
ಜನರಿಂದಲೇ ಜೈವಿಕ ತರಕಾರಿ
——————–
ಬ್ರಹ್ಮ ಕಲಶ ಸಂದರ್ಭ ನಡೆಯುವ ಅನ್ನದಾನಕ್ಕೆ ಬೇಕಾಗುವ ತರಕಾರಿಗಳನ್ನು ಊರಿನಲ್ಲೇ ಬೆಳೆಸುವ ಸಂಕಲ್ಪ. ಇದಕ್ಕಾಗಿ ತರಕಾರಿ ಬೀಜಗಳ ಪೂರೈಕೆ. ನಾಡಿನ ಗದ್ದೆ, ಬಯಲುಗಳಲ್ಲಿ ಬೀಜ ಬಿತ್ತಿ ಪಾಳುಭೂಮಿಯನ್ನು ಕೂಡಾ ಬೆಳೆ ತೆಗೆಯಲು ಬಳಸಬೇಕೆಂದು ಸಂದೇಶ.
ಪ್ರತಿಯೊಬ್ಬರೂ ಇಚ್ಚಾನುಶಕ್ತಿ ಬೆಳೆ ತೆಗೆದು ಕೊಡಬೇಕೆಂದು ನಿರ್ದೇಶ. ನಾಡಿನ ಬ್ರಹ್ಮಕಲಶಕ್ಕೆ ನಾಡಜನರಿಂದಲೇ ಜೈವಿಕ ತರಕಾರಿ ಪೂರೈಕೆ ಸ್ವಾವಲಂಬಿತನದ ಸಂದೇಶ ನೀಡುತ್ತದೆ.
ದೇಸೀ ಗೋವಿನ ವಿಭೂತಿ
————–
ವಿಭೂತಿಗಾಗಿ ಶುದ್ದ ದೇಸೀ ಗೋವಿನ ಸಗಣಿಯಿಂದ ತಯಾರಿಸಿದ ವಿಭೂತಿ ಅಗತ್ಯ. ಇದಕ್ಕಾಗಿ ಪ್ರತಿ ಮನೆಯಿಂದ 10 ಬೆರಣಿ ತಯಾರಿಸಿ ಕೊಡಬೇಕು. ಸಗಣಿ ಇಲ್ಲದವರಿಗೆ ಸಗಣಿ ಒದಗಿಸುತ್ತಾರೆ. 2 ಕೆ.ಜಿ ಸಗಣಿಯಿಂದ ಅಂದಾಜು 10 ಬೆರಣಿ ತಯಾರಿಸಲಾಗುತ್ತದೆ.
ಹೀಗೆ ನಿರಂತರ ಕಾಯಕದ ಶ್ರಮದಾನವೇ ಶಿವಾರ್ಪಣ ಯೋಜನೆ.
ಶಿವಾರ್ಪಣದ ಸಾಫಲ್ಯಕ್ಕೆ ಏತಡ್ಕ ಸುತ್ತುಮುತ್ತಲಿನ ಊರಲ್ಲಿ ಮನೆ ಮತ್ತು ಮನ ಅಭಿಯಾನ ಆರಂಭಗೊಂಡಿದೆ. ಉತ್ಸಾಹಿ ಜನರು ತಂಡೋಪತಂಡವಾಗಿ ಗೃಹ ಸಂಪರ್ಕ ಮಾಡುತ್ತಿದ್ದಾರೆ. ಈ ಅಭಿಯಾನವನ್ನು ಇತ್ತೀಚಿಗೆ ಬದಿಯಡ್ಕದ ಉದ್ಯಮಿ ನಿತ್ಯಾನಂದ ಶೆಣೈ ಉದ್ಘಾಟಿಸಿದರು.
ಡಾ. ವೈ. ವಿ ಕೃಷ್ಣಮೂರ್ತಿ ಮಾರ್ಗದರ್ಶನವಿತ್ತರು. ಚಂದ್ರಶೇಖರ ಏತಡ್ಕ ಸ್ವಾಗತಿಸಿದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ವೈ.ಶಾಮ ಭಟ್, ಗೌ. ಅಧ್ಯಕ್ಷ ವೈ.ಸುಬ್ರಾಯ ಭಟ್, ವೈ.ಶಂಕರ ಭಟ್ ಮೊದಲಾದವರು ನೇತೃತ್ವ ನೀಡಿದರು.