* ಅಜೆಕಾರು ಬಳಗದ 23ನೇ ಸರಣಿ ತಾಳಮದ್ದಳೆ ಅಭಿಯಾನಕ್ಕೆ ಸಮಾರೋಪ * * ಮುಂಬೈಯಲ್ಲಿ ಯಕ್ಷಗಾನದ ದಟ್ಟ ಹವಾ ಸೃಷ್ಠಿಗೆ ಅಭಿಯಾನ ಕಾರಣ

by Narayan Chambaltimar

ಮುಂಬೈ: ‘ಕರಾವಳಿಯ ಶ್ರೀಮಂತ ಕಲೆ ಯಕ್ಷಗಾನವಿಂದು ಮಹಾನಗರ ಮುಂಬೈಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ. ಇದಕ್ಕೆ ಪ್ರತಿವರ್ಷವೂ ತವರೂರಿಂದ ಬಂದು ಬಯಲಾಟ ಮತ್ತು ತಾಳಮದ್ದಳೆಗಳ ಮೂಲಕ ರಂಜಿಸುವ ಹೆಸರಾಂತ ಯಕ್ಷಗಾನ ಕಲಾವಿದರೇ ಮುಖ್ಯ ಕಾರಣವಾಗಿದ್ದಾರೆ. ಆದರೆ ಅವರನ್ನು ಕರೆತಂದು ಮುಂಬೈಯಲ್ಲಿ ಯಕ್ಷಗಾನ ಹವಾ ಮೂಡಿಸಿದ ಬಲುದೊಡ್ಡ ಕೀರ್ತಿ ಅಜೆಕಾರು ಬಾಲಕೃಷ್ಣ ಶೆಟ್ಟರಂತಹ ಕಲಾಸಂಘಟಕರಿಗೆ ಸಲ್ಲುತ್ತದೆ’ ಎಂದು ಮುಲುಂಡ್ ಬಂಟ್ಸ್ ಅಧ್ಯಕ್ಷ ಸಿಎ ಕರುಣಾಕರ ಶೆಟ್ಟಿ ಹೇಳಿದ್ದಾರೆ.
ಸೆಪ್ಟೆಂಬರ್ 1ರಂದು ಮುಲುಂಡ್ ಪಶ್ಚಿಮದ ಆರ್ಟ್ ಆಫ್ ಲಿವಿಂಗ್ ಸಭಾಂಗಣದಲ್ಲಿ ಜರಗಿದ ಅಜೆಕಾರು ಕಲಾಭಿಮಾನಿ ಬಳಗದ 23ನೇ ವರ್ಷದ ಸರಣಿ ತಾಳಮದ್ದಳೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ತಂಡದ ಎಲ್ಲಾ ಕಲಾವಿದರನ್ನು ಮುಲುಂಡ್ ಬಂಟ್ಸ್ ವತಿಯಿಂದ ಗೌರವಿಸಲಾಯಿತು.

ಅವಿಸ್ಮರಣೀಯ ಸಹಕಾರ:
ತವರೂರ ಹಿರಿಯ ಅರ್ಥಧಾರಿ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವರ್ಷಂಪ್ರತಿ ಎರಡು ತಂಡಗಳಾಗಿ ಮುಂಬೈ ನಗರದ ಉದ್ದಗಲಕ್ಕೆ ಜರಗುವ ತಾಳಮದ್ದಳೆ ಕಾರ್ಯಕ್ರಮಗಳು ಹಾಗೂ ವಿವಿಧ ಮೇಳಗಳ ಪ್ರಸಿದ್ಧ ವೃತ್ತಿ ಕಲಾವಿದರನ್ನು ಸಂಯೋಜಿಸಿ ನೀಡಲಾಗುವ ಯಕ್ಷಗಾನ ಬಯಲಾಟಗಳಿಗೆ ಮುಂಬೈಯ ಜನತೆ ಅವಿಸ್ಮರಣೀಯ ಸಹಕಾರ ನೀಡುತ್ತಿರುವುದು ತಾಯ್ನಾಡಿನ ಕಲಾವಿದರಿಗೆ ಧನ್ಯತೆಯ ಕಲಾಶ್ರಯ ತಂದುಕೊಟ್ಟಿದೆ. ಅದರಲ್ಲೂ ಮುಲುಂಡ್ ಬಂಟ್ಸ್ ಆರಂಭದಿಂದಲೂ ಪ್ರತಿ ವರ್ಷ ಶಿಸ್ತು ಬದ್ಧವಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು.

ಸಂಘಟಕರಿಗೆ ಗೌರವಾರ್ಪಣೆ:
ಮುಲುಂಡ್ ಬಂಟ್ಸ್ ಅಧ್ಯಕ್ಷರು ಸಿ/ಎ ಕರುಣಾಕರ ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಗೌರವಿಸಿದರು. ವಿಶ್ವಸ್ಥರಾದ ಎಸ್.ಬಿ. ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಪ್ರಸಾದ ಶೆಟ್ಟಿ, ಕೊಶಾಧಿಕಾರಿ ಸಿ/ಎ ಗಣೇಶ ಶೆಟ್ಟಿ, ಜೊತೆ ಕೊಶಾಧಿಕಾರಿ ಉದಯ ಶೆಟ್ಟಿ ಯಚ್, ಜೊತೆ ಕಾರ್ಯದರ್ಶಿ ಸುರೇಶ ಶೆಟ್ಟಿ ಕಡಂದಲೆ ಮತ್ತು ಶೇಖರ ಶೆಟ್ಟಿ ಕಡಂದಲೆ; ಮಹಿಳಾ ವಿಭಾಗದ ಅಧ್ಯಕ್ಷೆ ಆರತಿ.ವೈ ಶೆಟ್ಟಿ, ಉಪಾಧ್ಯಕ್ಷೆ ಶಶಿಪ್ರಭಾ.ಕೆ.ಶೆಟ್ಟಿ, ಕೋಶಾಧಿಕಾರಿ ಪ್ರತಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪೂರ್ಣಿಮ ಶೆಟ್ಟಿ ಅಲ್ಲದೆ ಸಮಿತಿಯ ಹರ್ಷವರ್ಧನ ಶೆಟ್ಟಿ ,ಯೋಗೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ ವಂದಿಸಿದರು.

‘ಭೀಷ್ಮ ಪರಶುರಾಮ – ತುಳುನಾಡ ಬಲೀಂದ್ರೆ’ ತಾಳಮದ್ದಳೆ:
ಸಭೆಯ ಬಳಿಕ ಸರಣಿಯ ಕೊನೆಯ ತಾಳಮದ್ದಳೆ ‘ಭೀಷ್ಮ-ಪರಶುರಾಮ (ಕನ್ನಡ); ತುಳುನಾಡ ಬಲೀಂದ್ರೆ (ತುಳು)’ ಜರಗಿತು. ಭಾಗವತರಾಗಿ ದೇವಿಪ್ರಸಾದ್ ಆಳ್ವ ತಲಪಾಡಿ, ಹಿಮ್ಮೇಳದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ್ ಶೆಟ್ಟಿ ವಗೆನಾಡು ಭಾಗವಹಿಸಿದ್ದರು.
ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಬಲಿ), ಜಯಪ್ರಕಾಶ್ ಶೆಟ್ಟಿ ಪೆರ್ಮುದೆ (ಪರಶುರಾಮ), ದಿನೇಶ್ ಶೆಟ್ಟಿ ಕಾವಳಕಟ್ಟೆ (ಭೀಷ್ಮ), ಸದಾಶಿವ ಆಳ್ವ ತಲಪಾಡಿ (ವಾಮನ), ಗುರುತೇಜ ಶೆಟ್ಟಿ ಒಡಿಯೂರು (ಶುಕ್ರಾಚಾರ್ಯ) ಅರ್ಥಧಾರಿ ಗಳಾಗಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00