ತುಳುವರ್ಲ್ಡ್ ಫೌಂಡೇಷನ್ ಚಟುವಟಿಕೆಗೆ ಕಟೀಲಿನಿಂದ ಚಾಲನೆ, ತುಳುವಿಗಾಗಿ ಸಮಗ್ರ ತುಳುನಾಡ ಜನತೆ ಕೈಜೋಡಿಸಲು ಸರ್ವೋತ್ತಮ ಶೆಟ್ಟಿ ಆಹ್ವಾನ

by Narayan Chambaltimar

ಕಣಿಪುರ ಸುದ್ದಿಜಾಲ

ಕಟೀಲು(ಸೆ.5)
ತುಳು ಭಾಷಾ ಸಂಸ್ಕೃತಿಯ ಅಭ್ಯುದಯಕ್ಕಾಗಿ ಕಾಳಜಿಯಿಂದ ರಚನಾತ್ಮಕ ಕಾಯಕ ನಿರತವಾಗುವ ಧ್ಯೇಯೋದ್ದೀಶದಿಂದ ಅಸ್ತಿತ್ವಕ್ಕೆ ಬಂದಿರುವ ತುಳು ವರ್ಲ್ಡ್ ಫೌಂಡೇಷನ್ ನ ವಿಸ್ತೃತ ಚಟುವಟಿಕೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದಿಂದ ಚಾಲನೆಯಾಯಿತು.
ಕಟೀಲು ಕ್ಷೇತ್ರದ ಅರ್ಚಕ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣರ ಉಪಸ್ಥಿತಿ ಮತ್ತು ಗೌರವಾಧ್ಯಕ್ಷತೆಯಲ್ಲಿರುವ ಸಂಘಟನೆಯ ಸೃಜನಶೀಲ ಚಟುವಟಿಕೆಯ ಮುನ್ನಡೆಗೆ ಕಟೀಲು ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂಬಂಧ ಕಟೀಲು ಕ್ಷೇತ್ರದಲ್ಲಿ ನಡೆದ ಫೌಂಡೇಷನ್ ಪದಾಧಿಕಾರಿಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿದ ವೇ.ಮೂ. ಹರಿನಾರಾಯಣ ದಾಸ ಆಸ್ರಣ್ಣರು “ಪಂಚ ದ್ರಾವಿಡ ಭಾಷೆಗಳಲ್ಲೇ ಪ್ರಾಚೀನವಾದ ತುಳು ಭಾಷೆಯಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಆ ಕುರಿತು ಅರಿತು, ಅಧ್ಯಯನದಿಂದ ಅಭಿಮಾನ ಪಡಬೇಕು. ತುಳು ಎಂದರೆ ಕೇವಲ ಮನೋರಂಜನಾ ಪ್ರದರ್ಶನಗಳಲ್ಲ. ಅದು ಬದುಕಿನ ಸಂಸ್ಕೃತಿ. ಇದರ ರಕ್ಷಣೆಗಾಗಿ ಜಗತ್ತಿನ ತುಳುವರೆಲ್ಲರೂ ಒಂದೇ ಕೊಡೆಯಡಿ ನೆರೆದು, ಒಂದೇ ಕುಟುಂಬದವರಂತೆ ಬೆರೆತು ದುಡಿಯಬೇಕು” ಎಂದರು.

ತುಳುವಿಗಾಗಿ ಕೈಜೋಡಿಸಿ
——————-
ಫೌಂಡೇಷನ್ ಅಧ್ಯಕ್ಷ ಅಬುದಾಬಿಯ ಸರ್ವೋತ್ತಮ ಶೆಟ್ಟಿ ಮಾತನಾಡಿ “ತುಳುವರಲ್ಲಿ ಒಗ್ಗಟ್ಟಿನ ಕೊರತೆ ಇದೆ. ತುಳು ಎಂದರೆ ಕೆಲವು ಜನಾಂಗದ ಭಾಷೆಯಲ್ಲ, ಅದು ಕರಾವಳಿಯ ಜನತೆಯ ಜೀವನ ಸಂಸ್ಕೃತಿ. ಈ ಕುರಿತು ಅರಿಯಬೇಕು, ಅಭಿಮಾನದಿಂದ ಜಗತ್ತಿನ ತುಳುವರೆಲ್ಲರೂ ಒಗ್ಗೂಡಬೇಕು. 8ನೇ ಪರಿಚ್ಛೇದ ಸೇರುವಿಕೆ ಮತ್ತು ತುಳುವಿನ ಬಹುಕಾಲದ ಬೇಡಿಕೆಗಳು ಈಡೇರಬೇಕು” ಎಂದರು.

ಫೌಂಡೇಷನಿಗೆ ಕಟೀಲು ಆಸ್ಥಾನ
——————–
ಜಾಗತಿಕ ತುಳು ಫೌಂಢೇಷನಿನ ಔದ್ಯೋಗಿಕ ಉದ್ಘಾಟನಾ ಸಮಾರಂಭ ಶೀಘ್ರವೇ ಕಟೀಲಿನಲ್ಲಿ ನಡೆಯಲಿದೆ. ಇದರಲ್ಲಿ ಜಗತ್ತಿನ ತುಳುವರೆಲ್ಲರೂ ಪಾಲ್ಗೊಳ್ಳಬೇಕು.
ಈ ಹಿನ್ನೆಲೆಯಲ್ಲಿ ಫೌಂಡೇಷನಿನ ಕೇಂದ್ರ ಕಛೇರಿ ಕಾರ್ಯಾಚರಿಸಲು ಕಟೀಲು ಕಾಲೇಜಿನ ಕೋಣೆಯೊಂದನ್ನು ಉಚಿತವಾಗಿ ನೀಡಲಾಗುವುದೆಂದು ಸಭೆಯಲ್ಲಿ ಗೌರವಾಧ್ಯಕ್ಷ ಶ್ರೀಹರಿನಾರಾಯಣ ದಾಸ ಆಸ್ರಣ್ಣರು ಘೋಷಿಸಿದರು.
ಕಟೀಲಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿಂದು ಫೌಂಢೇಷನ್ ಸ್ಥಾಪಕ, ನಿರ್ದೇಶಕ ಡಾ.ರಾಜೇಶ್ ಆಳ್ವ ಬದಿಯಡ್ಕ ಪ್ರಾಸ್ತಾವಿಕ ಮಾತನಾಡಿ ಸಂಘಟನೆಯ ಅಗತ್ಯ, ಅನಿವಾರ್ಯತೆ, ಧ್ಯೇಯೋದ್ದೇಶಗಳನ್ನು ವಿವರಿಸಿ ಫೌಂಡೇಷನ್ ಮುಂದಿನ ದಿನಗಳಲ್ಲಿ ವಿಶಾಲ ವ್ಯಾಪ್ತಿಯೊಂದಿಗೆ ಧ್ಯೇಯಬದ್ಧ ಚಟುವಟಿಕೆ ನಡೆಸಲಿದೆ ಎಂದರು..ಫೌಂಢೇಷನ್ ಪ್ರಧಾನ ಕಾರ್ಯದರ್ಶಿ, ಲೇಖಕ, ಚಿಂತಕ ಪ್ರೊ. ಪುರುಷೋತ್ತಮ ಬಲ್ಯಾಯ ಬೆಳ್ಮಣ್ಣು, ಗೌ. ಸದಸ್ಯರಾದ ಲೇಖಕಿ ವಿಜಯಲಕ್ಷ್ಮಿ ಶೆಟ್ಟಿ, ಡಾ. ಮಾಧವ ಎಂ.ಕೆ, ಉಪಾಧ್ಯಕ್ಷೆ ತಾರಾ ಆಚಾರ್ಯ ಉಡುಪಿ, ಉಪಾಧ್ಯಕ್ಷ ಪ್ರೊ. ಡಿ.ಯದುಪತಿ ಗೌಡ ಬೆಳ್ತಂಗಡಿ, ಚಂದ್ರಹಾಸ ದೇವಾಡಿಗ ಮೂಡಬಿದ್ರೆ, ಕಾರ್ಯಕಾರಿ ಮಂಡಳಿ ಸದಸ್ಯ, ‘ಕಣಿಪುರ’ ಸಂಪಾದಕ ಎಂ.ನಾ. ಚಂಬಲ್ತಿಮಾರ್, ಜನಪದ ಕಲಾವಿದ ಶಂಕರ ಸ್ವಾಮೀಕೃಪ, ಸುಖಾಲಾಕ್ಷಿ ವೈ. ಸುವರ್ಣ, ಸಂಚಾಲಕಿ ಆಶಾ ಶೆಟ್ಟಿ ಅತ್ತಾವರ, ಕಾರ್ಯದರ್ಶಿ ಭಾಸ್ಕರ್ ಕುಂಬ್ಳೆ, ಮುರಳೀ ಭಟ್ ಉಪ್ಪಂಗಳ, ಮೊದಲಾದವರು ಉಪಸ್ಥಿತರಿದ್ದರು.
ತುಳು ಭಾಷೆ, ಸಂಸ್ಕೃತಿ ಕುರಿತು ಜಾಗತಿಕ ತುಳುವರನ್ನು ಸಂಘಟಿಸುವುದರ ಜತೆಯಲ್ಲೇ ತುಳುವಿನ ಕುರಿತಾದ ಅಧ್ಯಯನಾತ್ಮಕ ದಾಖಲೀಕರಣ ಮತ್ತು ಅಕಾಡೆಮಿಕ್ ಕೆಲಸಗಳು ನಡೆಯಬೇಕೆಂದು ಸಭೆ ನಿರ್ಧರಿಸಿತು.
ಈ ದೃಷ್ಟಿಯಲ್ಲಿ ಫೌಂಡೇಷನ್ ಮುಂದಿಡುವ ಹೆಜ್ಜೆಗೆ ವಿಶ್ವದ ಸರ್ವ ತುಳುವರ ಬೆಂಬಲ ಬೇಕೆಂದು ಬಯಸಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00