ಕನ್ನಡ ಮಾಧ್ಯಮ ಶಾಲಾ ಮುಚ್ಚುಗಡೆಗೆ ಸರಕಾರದ ನಿರ್ಲಕ್ಷ್ಯ ಕಾರಣ! ಕನ್ನಡ ಶಾಲೆ ಮುಚ್ಚಿಸಿ ವಾಣಿಜ್ಯ ವಲಯ ಸ್ಥಳ ಕಬಳಿಸುತ್ತಿರುವ ಶಂಕೆ?

by Narayan Chambaltimar

ಕಟೀಲು(ಸೆ.5)
ಕರ್ನಾಟಕದ ಅನುದಾನಿತ ಶಾಲೆಗಳಿಗೆ ಸರಕಾರ ಅಧ್ಯಾಪಕರನ್ನು ನೇಮಿಸದಿರುವುದೇ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಕುಸಿತ ಮತ್ತು ಕನ್ನಡ ಶಾಲೆಗಳ ಮುಚ್ಚುಗಡೆಗೆ ಮುಖ್ಯ ಕಾರಣ. ವಿದ್ಯಾರ್ಥಿ ಕುಸಿತದ ಹಿನ್ನೆಲೆಯಲ್ಲಿ ಅಧ್ಯಾಪಕ ರಾಹಿತ್ಯದ ಶಾಲೆಗಳು ಮುಚ್ಚುಗಡೆಗೊಂಡಾಗ ಆ ಜಾಗವನ್ನು ಕೋಟ್ಯಾಂತರ ರೂಗಳ ವಹಿವಾಟಿನಿಂದ ಕಬಳಿಸುವ ಜಾಲವೂ ಇದೆಯೆಂದು ಕೇಳಿಬರುತ್ತಿರುವುದಾಗಿ ಕಟೀಲು ಕ್ಷೇತ್ರದ ಅರ್ಚಕ, ವೇ.ಮೂ. ಶ್ರೀಹರಿ ನಾರಾಯಣ ದಾಸ ಆಸ್ರಣ್ಣರು “ಕಣಿಪುರ” ಕ್ಕೆ ತಿಳಿಸಿದ್ದಾರೆ.

ಕಣಿಪುರ ಆನ್ಲೈನ್ ನಲ್ಲಿ ಪ್ರಕಟಗೊಂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಕನ್ನಡ ಮಾಧ್ಯಮ ಭಾಷಾ ಕಳಕಳಿಯ ವರದಿ ಪರಾಮರ್ಶಿಸಿ ಅವರು ಈ ಹೇಳಿಕೆ ಇತ್ತರು

ಕಳೆದ 20ಕ್ಕೂ ಅಧಿಕ ವರ್ಷಗಳಿಂದ ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳಿಗೆ ಅಧ್ಯಾಪಕ ನೇಮಕಾತಿ ಮತ್ತು ಸವಲತ್ತು ನೀಡಿಕೆಯಲ್ಲಿ ಸರಕಾರ ನಿಯಂತ್ರಣ ಹೇರುತ್ತಾ ಬಂದಿದೆ. ಸರಕಾರ ಕನ್ನಡ ಮಾಧ್ಯಮದ ಪರ ಎನ್ನುವುದು ಕೇವಲ ತೋರಿಕೆಯ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ.
ಆಂಗ್ಲ ಮಾಧ್ಯಮಕ್ಕೆ ವಿಶೇಷ ಸವಲತ್ತು ನೀಡುವ ಸರಕಾರ ಕನ್ನಡ ಮಾಧ್ಯವನ್ನು ನಿರ್ಲಕ್ಷಿಸುವುದಕ್ಕೆ ನೂರಾರು ಉದಾಹರಣೆ ಇದೆ ಎಂದವರು ಹೇಳಿದರು.

ಕಳೆದೆರಡು ದಶಕಗಳಿಂದ ಅನುದಾನಿತ ಶಾಲೆಗಳಿಗೆ ಅಧ್ಯಾಪಕರನ್ನು ನೇಮಿಸದೇ ಇರುವುದರಿಂದ ಸಹಜವಾಗಿಯೇ ವಿದ್ಯಾರ್ಥಿ ಕುಸಿತದಿಂದ ಅನೇಕ ಕನ್ನಡ ಶಾಲೆ ಮುಚ್ಚಿದ ಉದಾಹರಣೆ ನಮ್ಮ ಮುಂದಿದೆ. ಬಳಿಕ ಶಾಲೆಯ ಪಾಳು ಕಟ್ಟಡ ಕುಸಿಯುತ್ತದೆ. ಇದನ್ನು ಸದ್ದಿಲ್ಲದೇ ಭೂಮಾಲಕರು ವಾಣಿಜ್ಯ ವಲಯಕ್ಕೆ ಮಾರುವ ವಾಣಿಜ್ಯ ವ್ಯವಹಾರವೂ ಸದ್ದಿಲ್ಲದೇ ನಡೆಯುತ್ತಿದೆ.
ಇದನ್ನು ಯಾರೂ ಪ್ರಶ್ನಿಸುತ್ತಿಲ್ಲ ಎಂಬುದೇ ವಿಷಾದನೀಯ ಎಂದವರು ಹೇಳಿದರು.

ಕನ್ನಡ ಅನುದಾನಿತ ಶಾಲೆಗಳ ಮೇಲೆ ಸರಕಾರದ ನಿರ್ಲಕ್ಷ್ಯ ಧೋರಣೆ ಕೊನೆಗೊಳಿಸಲು ಕನ್ನಡ ನಾಯಕರು, ಹೋರಾಟಗಾರರು ಮುಂದಾಗಬೇಕೆಂದೂ ಅವರು ಆಗ್ರಹಿಸಿದ್ದಾರೆ.
ಕಟೀಲು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳು ಸಂಪೂರ್ಣವಾಗಿ ದೇವಳದ ವತಿಯಿಂದಲೇ ನಡೆಯುತ್ತಿದ್ದು, ಇಲ್ಲಿ ಇಂಗ್ಳೀಷ್ ಮಾಧ್ಯಮಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಅಧ್ಯಾಪಕರ ಆಯ್ಕೆ, ನೇಮಕಾತಿ, ವೇತನಗಳೆಲ್ಲವೂ ದೇವಾಲಯದ ಕಡೆಯಿಂದಲೇ ಆಗುತ್ತಿದ್ದು, ಸೂಕ್ತ ಅಧ್ಯಾಪಕರನ್ನು ನೇಮಿಸಿದರೆ ಕನ್ನಡ ಮಾಧ್ಯಮಕ್ಕೂ ಆಕರ್ಷಣೆಯ ಕೊರತೆಯಾಗಿಲ್ಲ ಎಂಬುದಕ್ಕೆ ಇದೇ ನಿದರ್ಶನವೆಂದು ಅವರು “ಕಣಿಪುರ”ಕ್ಕೆ ತಿಳಿಸಿದರು.
ಪ್ರಸ್ತುತ ಸರಕಾರ ಅನುದಾನಿತ ಶಾಲೆಗಳಿಗೆ ಮತ್ಯಾವ ಸೌಲಭ್ಯಗಳನ್ನು ನೀಡದಿದ್ದರೂ ಅಧ್ಯಾಪಕರನ್ನು ನೇಮಿಸಬೇಕು. ಅಧ್ಯಾಪಕರಿಲ್ಲದಿರುವುದೇ ಕನ್ನಡ ಮಾಧ್ಯಮ ಶಾಲೆಗಳ ಮುಚ್ಚುಗಡೆಗೆ ಕಾರಣವೇ ಹೊರತು ಕನ್ನಡಾಭಿಮಾನದ ಕೊರತೆ ಅಲ್ಲ ಎಂದವರು ಉದಾಹರಣೆ ಸಹಿತ ಹೇಳಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00