ಸಿನಿಮಾ ರಂಗದಂತೆಯೇ ರಾಜಕೀಯದಲ್ಲೂ ಕಾಸ್ಟಿಂಗ್ ಕೌಚ್ ಉಂಟೆಂದು ಹೇಳಿಕೆ ಇತ್ತ ಕಾಂಗೈ ನಾಯಕಿ ಪಕ್ಷದಿಂದಲೇ ಅಮಾನತು

by Narayan Chambaltimar

ಕಣಿಪುರ ಸುದ್ದಿಜಾಲ

ಕೇರಳದ ಸಿನಿಮಾದಂತೆಯೇ ಕಾಂಗ್ರೆಸ್ ರಾಜಕೀಯದಲ್ಲೂ “ಕಾಸ್ಟಿಂಗ್ ಕೌಚ್” ಇದೆಯೆಂದು ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಆರೋಪಿಸಿ, ಕಾಂಗೈ ಪಕ್ಷದ ನಾಯಕರಿಗೆ ಇರಿಸು ಮುರಿಸುಂಟುಮಾಡಿದ ಮಹಿಳಾ ಕಾಂಗೈ ನಾಯಕಿ ಸಿಮಿ ರೋಸ್ಬಿನ್ ಜಾನ್ ಅವರನ್ನು ಕಾಂಗ್ರೆಸ್ಸಿನ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿದೆ.
ಪಕ್ಷಕ್ಕೆ ಮುಜುಗರ, ಅವಮಾನವಾಗುವ ಮತ್ತು ಮಹಿಳಾ ಕಾರ್ಯಕರ್ತೆಯರಿಗೆ ಅವಮಾನವನ್ನುಂಟುಮಾಡಿದ ಹೇಳಿಕೆಯನ್ನು ಸಾರ್ವಜನಿಕ ಮಾಧ್ಯಮಗಳ ಮುಂದೆ ಹೇಳಿರುವುದು ಪಕ್ಷದ ಶಿಸ್ತು ಪಾಲನೆಯ ಉಲ್ಲಂಘನೆಯೆಂದು ಉಲ್ಲೇಖಿಸಿ ಕೆ.ಪಿ.ಸಿ.ಸಿ. ರಾಜ್ಯಾಧ್ಯಕ್ಷ ಕೆ.ಸುಧಾಕರನ್ ಈ ಕ್ರಮ ಕೈಗೊಂಡಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಅಧಿಕೃತ ಪ್ರಕಟಣೆ ನೀಡಿದ್ದಾರೆ.

ಸಿನಿಮಾ ರಂಗದಂತೆಯೇ ರಾಜಕೀಯ ಪಕ್ಷದಲ್ಲೂ ಮಹಿಳೆಯರ ಮೇಲೆ ಒತ್ತಡದಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ರಾಜಕೀಯದಲ್ಲಿ ಉನ್ನತ ಸ್ಥಾನ,ಮಾನದ ಆಮಿಷ ಒಡ್ಡಿ ನಾಯಕರು ಬಲೆಗೆ ಕೆಡವಿಕೊಳ್ಳುತ್ತಾರೆ. ತನಗೆ ಸಹಿತ ಅನೇಕರಿಗೆ ಇಂಥಾ ಅನುಭವಗಳಾಗಿವೆ ಎಂದು ಸಿಮಿ ರೋಸ್ಬನ್ ಅಗಸ್ಟಿನ್ ಅವರು ಟಿ.ವಿ. ವಾಹಿನಿಯೊಂದರಲ್ಲಿ ಹೇಳಿದ್ದರು.
ಸಿಮಿ ಅವರು ಮಾಜಿ ಎಐಸಿಸಿ ಸದಸ್ಯೆ ಮತ್ತು ಲೋಕಸೇವಾ ಆಯೋಗದ ಸದಸ್ಯೆಯಾಗಿದ್ದ ಮಹಿಳಾ ಕಾಂಗ್ರೆಸ್ಸಿನ ಮುಂಚೂಣಿ ನಾಯಕಿಯಾಗಿದ್ದರು. ಆದರೆ ಪಕ್ಷದ ನಾಯಕರ ಬಯಕೆಗೆ ಬಗ್ಗಲಿಲ್ಲ ಎಂಬ ಕಾರಣದಿಂದ ಅವರನ್ನು ಪಕ್ಷದಲ್ಲಿ ಬದಿಗೆ ಸರಿಸಿ, ಅವಕಾಶ ನೀಡದೇ ತೇಜೋವಧೆ ಮಾಡಲಾಯಿತೆಂದು ಅವರು ಬಹಿರಂಗ ಹೇಳಿಕೆ ನೀಡಿದ್ದರು.

ಈಗಿನ ವಿಪಕ್ಷ ನಾಯಕ ವಿ.ಡಿ. ಸತೀಶನ್ ಸಹಿತ ಪ್ರಮುಖ ನಾಯಕರ ದೌರ್ಜನ್ಯದ ವಿರುದ್ಧ ಈ ಹಿಂದೆಯೇ ಪಕ್ಷದ ಮೇಲ್ಘಟಕಕ್ಕೆ ದೂರಿತ್ತರೂ ಯಾವುದೇ ಪ್ರಯೋಜನವಾಗಲಿಲ್ಲ. ದೂರು ನೀಡಿದ ಕಾರಣ ಮತ್ತು ಅವರ ಲೈಂಗಿಕ ಬಯಕೆಗೆ ಬಗ್ಗದೇ ಇದ್ದ ಕಾರಣ ಪಕ್ಷದೊಳಗೆ ಗುಂಪು ಕಟ್ಟಿ ಉದ್ದೇಶಪೂರ್ವಕ ನಮ್ಮಂತವರನ್ನು ಬದಿಗೆ ತಳ್ಳಲಾಯಿತೆಂದು ಅವರು ಆಪಾದಿಸಿದ್ದಾರೆ.
ಇವರ ಹೇಳಿಕೆ ಕೇರಳದ ಕಾಂಗ್ರೆಸ್ಸಿನೊಳಗೆ ಅಂತರ್ ಕಲಹ ಸಹಿತ ವಿವಾದವನ್ನೆಬ್ಬಿಸಿದೆ. ಪಕ್ಷಕ್ಕೆ ಮುಜುಗರ ತಂದಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘನೆಯ ಅಪರಾಧ ಎಂದು ಬಿಂಬಿಸಿ ಅವರನ್ನು ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಸಕ್ರಿಯವಾಗಿದೆ.
ಈ ಗುಂಪುಗಳು ಪಕ್ಷದಲ್ಲಿ ಹಿಡಿತ ಸ್ವಾಧೀನಿಸಿ ಕಾರ್ಯಕರ್ತೆಯರನ್ನು ಶೋಷಿಸುತ್ತಾರೆ. ದೂರು ನೀಡಿದರೆ ಕಣ್ಕಟ್ಟಿಗೆ ತನಿಖಾ ಆಯೋಗ ರಚಿಸಿ ಸುಮ್ಮನಾಗುತ್ತಾರೆ. ಸಂತ್ರಸ್ಥರಿಗೆ ರಾಜಕೀಯ ಭವಿಷ್ಯವೇ ಮುಖ್ಯವಾದಲ್ಲಿ ಸಹಕರಿಸಿ ಜತೆಸೇರಬೇಕು. ಅದಲ್ಲದಿದ್ದರೆ ರಾಜಕೀಯದಿಂದ ನಿರ್ಗಮಿಸಬೇಕು ಎಂದಿದ್ದರು ಮಾಜಿ ನಾಯಕಿ ಸಿಮಿ ಜಾನ್.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00