ಕಣಿಪುರ ಪುಸ್ತಕ ನೋಟ
ಲಾಭದಲೇ ನಡೆಯುತ್ತಿದ್ದ ವ್ಯಾಪಾರ ಬಿಟ್ಟು ಉತ್ತರಕನ್ನಡಕ್ಕೊಂದು ಉತ್ತರಕನ್ನಡಿಗರದ್ದೇ ಯಕ್ಷಗಾನ ಮೇಳ ಬೇಕೆಂದು ಮೇಳ ಕಟ್ಟಿ ಮೆರೆದ ಸಂತೆಗುಳಿ ನಾರಾಯಣ ಭಟ್ಟರ ಬದುಕಿನ ಕನ್ನಡಿಯಂತೆ ಅವರ ಜೀವನಗಾಥೆ ಆಟದ ಮೇಳ
ಕೃತಿ ಮಾತಾಡುತ್ತಿದೆ.
ಇದು ಮೇಳ ಕಟ್ಟಿ ಮೆರೆದ ವ್ಯಕ್ತಿಯೊಬ್ಬರ ಕೇವಲ ಆತ್ಮಕತೆಯಲ್ಲ. ಸುಮಾರು 75ವರ್ಷಗಳ ಹಿಂದಿನ ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕಲಾವ್ಯಸನದ ದರ್ಪಣ ಮತ್ತು ನೆಲದ ದನಿ.
ಸಂತೆಗುಳಿ ನಾರಾಯಣ ಭಟ್ಟರು ಐತಿಹಾಸಿಕ ಸಂಯುಕ್ತ ಮೇಳ ಕಟ್ಟಿದವರು. ಪರಸ್ಪರ ಜತೆವೇಷ ಮಾಡದಿದ್ದ ಉ.ಕ.ದ ತಾರಾ ಕಲಾವಿದರನ್ನೆಲ್ಲ ಒಂದೇ ಮೇಳದಲ್ಲಿ ಒಟ್ಟಿಗೆ ತಿರುಗಾಟ ಮಾಡಿಸಿದವರು. ಉತ್ತರ ಕನ್ನಡಕ್ಕೆ ಸ್ಥಳೀಯರದ್ದೇ ಮೇಳ ಬೇಕೆಂದು ಕನಸುಕಂಡವರು. ಈ ಕನಸಿನ ಸಾಫಲ್ಯ ಮತ್ತದರ ಬವಣೆಯ ಕಥನಗಳೇ ಈ ಅಪೂರ್ವ ಕೃತಿ. ಆದ್ದರಿಂದಲೇ ಇದು ವ್ಯಕ್ತಿ ಕಥನದ ಜತೆಯಲ್ಲೇ ನಾಡಿನ ಸಾಂಸ್ಕೃತಿಕ ಇತಿಹಾಸದ ನಿನ್ನೆಗಳ ದಾಖಲಾತಿಯೂ ಹೌದು.
ಕಳೆದಲ ಒಂದು ಶತಮಾನದ ಯಕ್ಷಗಾನ ಅಭ್ಯುದಯದಲ್ಲಿ ಕಲಾವಿದರ ತಾರೋದಯಗಳಾಗಬೇಕಿದ್ದರೆ ಮೇಳ ಕಟ್ಟಿ ನಡೆಸುವ ತಾಕತ್ತಿನ ಯಜಮಾನರು ಬೇಕಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಯಜಮಾನರು ಹುಟ್ಟಿಕೊಂಡಾಗ ಉತ್ತರ ಕನ್ನಡದಲ್ಲಿ ಅಂದಿಗೂ, ಇಂದಿಗೂ ಪೂರ್ಣಾವಧಿಯ ವ್ಯವಸಾಯ ಮೇಳಗಳೇ ಇಲ್ಲ. ಈ ಕೊರತೆ ನೀಗಿಸಿ ಪ್ರಬುದ್ಧ ಮೇಳ ಕಟ್ಟಬೇಕೆಂದು ಹೊರಟ ವ್ಯಕ್ತಿಯೊಬ್ಬರು ಅನುಭವಿಸಿದ ಕದನಕತೆಗಳಿಗೆ ಈ ಕೃತಿ ಕನ್ನಡಿ ಹಿಡಿದಿದೆ. ಜತೆಗೆ ಉ.ಕದ ಹವ್ಯಕರ ಬದುಕಿನ ಭಾವಬಂಧಗಳಿಗೂ ಧ್ವನಿಯಾಗಿದೆ.
“ಯಕ್ಷಗಾನದ ನಿನ್ನೆಯ ಕಥನಗಳೆಲ್ಲ ಗೆದ್ದಲು ತಿಂದ ಹಳೆಯ ಭಾವಚಿತ್ರದಂತೆ ಚೂರು ಚೂರಾಗಿವೆ. ಅವುಗಳನ್ನೆಲ್ಲ ಒಗ್ಗೂಡಿಸಿ ಸಾಂಗತ್ಯಪೂರ್ಣವಾದ, ತರ್ಕಸಮ್ಮತವಾದ
ಚಿತ್ರಣವೊಂದನ್ನು ಕೊಡುವುದು ಸಾಹಸವೇ ಹೌದು. ಸಂತೆಗುಳಿ ನಾರಾಯಣ ಭಟ್ಟರ ಬದುಕಿನ ಚಿತ್ರಣವಾದ ಆಟದ ಮೇಳ
ನಂಬಲರ್ಹ ಮಾಹಿತಿಗಳಿಂದಲೇ ಶೋಭಿತವಾಗಿದೆಯೆಂದುವ ಆತ್ಮವಿಶ್ವಾಸದಿಂದಲೇ ಹೇಳಬಹುದು” ಎಂದು “ಯಕ್ಷರಂಗ” ಸಂಪಾದಕ ಕಡತೋಕ ಗೋಪಾಲಕೃಷ್ಣ ಭಾಗವತರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.
ಇದು ಇಡಗುಂಜಿ ಮೇಳದ ಕೆರೆಮನೆ ಶಿವಾನಂದ ಹೆಗಡೆ ನಿರೂಪಿಸಿದ ಚೊಚ್ಚಲ ಕೃತಿ. ಪತ್ರಿಕೆಗಳಿಗೆ, ಸ್ಮರಣ ಸಂಚಿಕೆಗಳಿಗೆ ಲೇಖನ ಬರೆದಿದ್ದರೂ ಕಲಾವಿದನೊಬ್ಬ ಇನ್ನೋರ್ವ ಹಿರಿಯ ಕಲಾವಿದನನ್ನು ಮಾತಾಡಿಸಿ ಕಳೆದ ಕಾಲದ ನುಡಿಚಿತ್ರ ಕಟ್ಟಿದ ವೈಶಿಷ್ಟ್ಯ ಇದರದ್ದು.
“ಒಟ್ಟಾರೆ ಬದುಕಿನ ಸಂಕಷ್ಟ, ಸಂಧಿಗ್ಧತೆ, ಸಂಘರ್ಷಗಳನ್ನೊಳಗೊಂಡ ಸಂತೃಪ್ತ ಬಾಳಿನ ಆತ್ಮಚರಿತ್ರೆ”ಇದೆಂದು ಕೃತಿಯ ನಿರೂಪಕ ಕೆರೆಮನೆ ಶಿವಾನಂದರು ಹೇಳುತ್ತಾರೆ.
90ರ ಮುಸ್ಸಂಜೆಯಲ್ಲಿರುವ ಸಂತೆಗುಳಿ ನಾರಾಯಣ ಭಟ್ಟರು ಈ ಕೃತಿಯ ಮೂಲಕ “ಬರ್ರೋ ನಮ್ಮೂರಿಗೆ..” ಎಂದು ಆಹ್ವಾನಿಸುವಲ್ಲಿಂದ ಆರಂಭ.
ನಿರೂಪಕ ಶಿವಾನಂದರು “ಪೇಳುವೆನೀ ಕಥಾಮೃತವ” ಎನ್ನುವಲ್ಲಿಂದಲೇ ಶುರು.
ಒಟ್ಟು 166ಪುಟಗಳ ಕಥನ ‘ಬಾಳ ಮುಸ್ಸಂಜೆಯಲಿ’ ಅಧ್ಯಾಯದೊಂದಿಗೆ ಕೊನೆಯಾಗುತ್ತದೆ.
ಹೊಸಪೇಟೆಯ ಯಾಜಿಪ್ರಕಾಶನ ಪ್ರಕಾಶಿಸಿದ ಕೃತಿ(7019637741)ಯನ್ನು ಸ್ವತಃ ಸಂತೆಗುಳಿ ನಾರಾಯಣ ಭಟ್ಟರೇ ಮೆಚ್ಚಿದ್ದಾರೆ. ಅರಿತ ಓದುಗರು ” ಸಾರ್ಥಕ ಜೀವನದ ಸಾರ್ಥಕ ಚಿತ್ರಣ” ಎಂದಿದ್ದಾರೆ.