kanipura special
ಸುಳ್ಯ ಚೆನ್ನಕೇಶವ ದೇವಾಲಯದ ಆಚಾರನುಷ್ಠಾನಗಳಂಗವಾಗಿ ಪಯಸ್ವಿನಿ ನದಿಯ ಮೀನುಗಳಿಗೆ ವಾಡಿಕೆಯಂತೆ ಅಕ್ಕಿ ಉಣಿಸುವ ಆರಾಧನೆಗೆ ನಿನ್ನೆ ಶ್ರಾವಣ ಅಮವಾಸ್ಯೆಯಂದು ಚಾಲನೆಯಾಯಿತು.
ಚೆನ್ನಕೇಶವ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರರು, ಬಲ್ಲಾಳ ಪ್ರತಿನಿಧಿಗಳು, ಕ್ಷೇತ್ರದ ಅರ್ಚಕರು, ಊರ ಮುಖಂಡರೆಲ್ಲ ಜತೆಯಾಗಿ ದೇಗುಲದಿಂದ ಬೂಡು ನಾಲ್ಕುಸ್ಥಾನದ ದೈವಗಳ ಚಾವಡಿಗೆ ಬಂದು ಪ್ರಾರ್ಥಿಸಿ ಬಳಿಕ ಪಯಸ್ವಿನಿಯ ತೀರಕ್ಕೆ ವಾಡಿಕೆಯಂತೆ ತೆರಳಿದರು.
ಪಯಸ್ವಿನೀ ದಂಡೆಯಲ್ಲಿ ಗಂಗಾ-ವರುಣ ಪೂಜೆ ಸಲ್ಲಿಸಿ ನೈವೇದ್ಯವನ್ನಿರಿಸಿ, ತೀರ್ಥಸ್ನಾನಗೈದು ಪ್ರಾರ್ಥಿಸಿ, ಅಕ್ಕಿ, ಭತ್ತ, ತೆಂಗಿನಕಾಯಿ ಹೋಳು, ಬಾಳೆ ಹಣ್ಣು, ಪತ್ರಪುಷ್ಪ ಮೊದಲಾದುದನ್ನು ನದಿಯ ಮೀನುಗಳಿಗೆ ಸಮರ್ಪಿಸಲಾಯಿತು.
ಇದನ್ನು ಸೇವಿಸಲೆಂದೇ ಹಿಂಡು, ಹಿಂಡು ಮೀನುಗಳು ಬರುತ್ತವೆಂದು ಭಕ್ತರ ನಂಬಿಕೆ.
ಇನ್ನು ಮುಂದೆ ಸತತ ನಾಲ್ಕೂವರೆ ತಿಂಗಳ ಕಾಲ ದೈನಂದಿನ ಮಧ್ಯಾಹ್ನ 12ರ ಮುಂಚಿತ ಇಲ್ಲಿ ಮೀನುಗಳಿಗೆ ಅಕ್ಕಿ ಹಾಕುವ ಪ್ರಕ್ರಿಯೆ ಕಡ್ಡಾಯವಾಗಿ ನಡೆಯಲಿದೆ.
ಕ್ಷೇತ್ರಾಚಾರಕ್ಕೆ ಸಂಬಂಧಿಸಿದ ಪ್ರಾಚೀನ ಆರಾಧನಾ ವೈಶಿಷ್ಠ್ಯ ಇದಾಗಿದೆ. ಅನಾದಿ ಕಾಲದಿಂದಲೂ ಇದು ನಡೆಯುತ್ತಿದ್ದು ತೊಡಿಕಾನ ಮಲ್ಲಿಕಾರ್ಜುನ ದೇವರ ಮೀನುಗಳು ಈ ಅಕ್ಕಿ ಸೇವನೆಗೆ ಬರುತ್ತವೆಂದು ನಂಬಿದ ಜನತೆ, ಪಯಸ್ವಿನಿಯ ಮೀನುಗಳನ್ನು ಈ ಅವಧಿಯಲ್ಲಿ ವಿಶೇಷವಾಗಿ ನಂಬುತ್ತಾರೆ.
ಶ್ರಾವಣ ಮಾಸದ ಅಮವಾಸ್ಯೆಯಂದು ಆರಂಭಗೊಂಡು ಮುಂದಿನ ಜನವರಿಯಲ್ಲಿ ಚೆನ್ನಕೇಶವ ದೇವರ ಜಾತ್ರೋತ್ಸವದ ಕೊಡಿ ಇಳಿಯುವ ತನಕ ನಿರಂತರ ಈ ಆರಾಧನೆ ನಡೆಯಲಿದೆ. ಇದಕ್ಕೆಂದೇ ಪನ್ನೆಬೀಡು ಚಾವಡಿಯಿಂದ ಬಲ್ಲಾಳರ ಪ್ರತಿನಿಧಿಯೊಬ್ಬರು ದಿನವೂ ಬಂದು ಅಕ್ಕಿ ಸಮರ್ಪಿಸುತ್ತಾರೆ.
ನಿನ್ನೆ ಪಯಸ್ವಿನಿ ತಟದಲ್ಲಿ ನಡೆದ ಮತ್ಸ್ಯಾಕ್ಷತಾ ಪೂಜೆಗೆ ಅರ್ಚಕ ಹರಿಕೃಷ್ಣ ಭಟ್ ನೇತೃತ್ವ ನೀಡಿದರು. ಬಲ್ಲಾಳ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ಚೆನ್ನಕೇಶವ ದೇಗುಲದ ಕೃಪಾಶಂಕರ ತುದಿಯಡ್ಕ ಮೊದಲಾದವರೊಂದಿಗೆ ಊರ ಮುಖಂಡರು, ಜನ ಪ್ರತಿನಿಧಿಗಳು ಪಾಲ್ಗೊಂಡರು.
ತುಳುನಾಡಿನಲ್ಲಿ ಶ್ರಾವಣ ಮಾಸದಲ್ಲಿ ವಿಶಿಷ್ಟ ಆಚರಣೆಗಳಿದ್ದು, ಅದರಲ್ಲಿ ಮತ್ಸ್ಯ ಆರಾಧನೆ ಅಪೂರ್ವ ಮತ್ತು ವೈಶಿಷ್ಠ್ಯಮಯವಾಗಿದೆ.
ಚಿತ್ರ, ಮಾಹಿತಿ: ಗಂಗಾಧರ ಕಲ್ಲಪಳ್ಳಿ, ಸುಳ್ಯ