ಕಣಿಪುರ ಸುದ್ದಿಜಾಲ
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ) ವತಿಯಿಂದ ಶ್ರೀಮಯ ಯಕ್ಷಗಾನ ಕಲಾ ಕೇಂದ್ರ ದಲ್ಲಿ ನಡೆದ ಅಖಿಲ ಭಾರತ ಕಲಾ ವಿದ್ಯಾರ್ಥಿಗಳ ಯಕ್ಷಗಾನ ಪರಿಚಯಾತ್ಮಕ ಕಾರ್ಯಕ್ರಮ ಸಮಾರೋಪಗೊಂಡಿತು.
ಮಂಗಳೂರು ವಲಯ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕಾರ್ಯಾಗಾರದ ಕುರಿತು ಮಾತನಾಡುತ್ತಾ “ಯಕ್ಷಗಾನ ಕಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಇಡಗುಂಜಿ ಮೇಳವನ್ನು ಶ್ಲಾಘಿಸಿದರು ಮಾತ್ರವಲ್ಲದೇ ಇದಕ್ಕೆ ಜನರ ಸಹಕಾರವೂ ಅತೀ ಅವಶ್ಯವಾಗಿದೆ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತಿ ಉತ್ತರ ಪ್ರಾಂತ್ಯದ ಶ್ರೀನಿವಾಸ ವಹಿಸಿದ್ದರು. ಕಲೆಯೊಂದಿಗೆ ಬದುಕಿದರೆ ಆನಂದಮಯ ಜೀವನ ಎಂದು ಕಲಾ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನ್ಯಾಯವಾದಿ, ಪತ್ರಕರ್ತ ಎಂ.ಎನ್.ಸುಬ್ರಹ್ಮಣ್ಯ ಪಾಲ್ಗೊಂಡರು.
ಕಾರ್ಯಾಗಾರದ ಕುರಿತಾಗಿ ಅಖಿಲ ಭಾರತ ಕಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಸಭೆಯಲ್ಲಿ ವಿವರವಾಗಿ ವಿವರಿಸಿದರು. ಸಭಾ ಕಾರ್ಯಕ್ರಮದ ನಂತರ ಯಕ್ಷಗಾನದ ಆಂಗೋಪಾಂಗಗಳನ್ನು ಕಲಿತ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ ಪ್ರದರ್ಶನ ನಡೆಯಿತು. ಅಲ್ಲದೆ ಯಕ್ಷಗಾನ ಕಲಿತ ವಿದ್ಯಾರ್ಥಿಗಳು ಅವರ ಅವರ ರಾಜ್ಯದ ಬೇರೆ ಬೇರೆ ರೀತಿಯ ಕಲೆಗಳ ಪ್ರದರ್ಶನ ನೀಡಿ ಸೇರಿದ ಜನರ ಮನಸೂರೆ ಗೊಂಡರು. ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಡಾ.ಎಂ.ಪ್ರಭಾಕರ ಜೋಶಿ, ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಕಲಾಚಿಂತಕ ಗುರುರಾಜ ಮಾರ್ಪಳ್ಳಿ ವಿದ್ಯಾರ್ಥಿಗಳಿಗೆ ಯಕ್ಷಗಾನದ ಕುರಿತು ಸುಮಾರು ಹದಿನೈದು ದಿನಗಳ ತರಗತಿ ನಡೆಸಿಕೊಟ್ಟರು.ಮಂಡಳಿಯ ನಿರ್ದೇಶಕರ ಕೆರೆಮನೆ ಶಿವಾನಂದ ಹೆಗಡೆ ಯವರು ಸತತ ಮೂರನೇ ವರ್ಷದ ಈ ಕಾರ್ಯಾಗಾರವನ್ನು ೨೧ ದಿನಗಳ ಕಾಲ ಅಚ್ಚುಕಟ್ಟಾಗಿ ನಡೆಸಿದರು. ಶಿಕ್ಷಕರಾಗಿ ಕೆರೆಮನೆ ಶ್ರೀಧರ ಹೆಗಡೆ, ಚಂದ್ರಶೇಖರ ಎನ್ ಹಾಗೂ ಶ್ರೀಧರ ಮರಾಠಿ ಅಲ್ಲದೇ ಗಣೇಶ ಯಾಜಿ ಮಾವಿನಕೆರೆ ಹಾಗೂ ಶ್ರೀಧರ ಪಿ ಗೌಡ ಇವರು ಕೂಡಾ ಕಾರ್ಯಾಗಾರದಲ್ಲಿ ಸಹಕಾರ ನೀಡಿದರು. ಮುಖ್ಯವಾಗಿ ಬಣ್ಣ ಹಾಗೂ ವೇಷ ಭೂಷಣ ಕಾರ್ಯಾಗಾರದಲ್ಲಿ ಈಶ್ವರ ಭಟ್ಟ ಅಂಸಳ್ಳಿ ಹಾಗೂ ಮಹಾವೀರ ಜೈನ ಇವರು ಸಹಕರಿಸಿದರು.