ಕಣಿಪುರ ಸುದ್ದಿಜಾಲ
ಪ್ರತಿಷ್ಠಿತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರ ವಲಯದ ಸಾಧಕರನ್ನು ಅಧ್ಯಕ್ಷರನ್ನಾಗಿಸುವ ಉದ್ದೇಶದ ಪರಾಮರ್ಶೆ ಕನ್ನಡ ನಾಡಿನ ಸಾಹಿತ್ಯ ವಲಯದಲ್ಲಿ ಚರ್ಚೆಗೆ, ವಿವಾದಕ್ಕೆ ಗ್ರಾಸವಾಗಿದೆ.
ನಾಡಿಗೆ ಕೊಡುಗೆ ಇತ್ತ ವಿಜ್ಞಾನ, ಕ್ರೀಡೆ, ತಂತ್ರಜ್ಞಾನ, ಕೃಷಿ, ಉದ್ಯಮ ಸಹಿತ ಸಾಹಿತ್ಯೇತರ ವಲಯದ ಮಹಾನ್ ಸಾಧಕರನ್ನೂ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸುವ ಕುರಿತು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಅನಿಸಿಕೆ ಮುಂದಿಟ್ಟಿರುವುದು ಚರ್ಚೆಯನ್ನು ಹುಟ್ಟುಹಾಕಿದೆ
ಅಖಿಲ ಭಾರತ ಕನ್ನಡ ಸಾಹಿತ್ಯ ಎನ್ನುವುದು ಕನ್ನಡ ಭಾಷಾ ಸಾಹಿತ್ಯದ ನುಡಿಜಾತ್ರೆ. ಇದು ಸಾಹಿತಿ, ಸಾಹಿತ್ಯ ಪ್ರಿಯರಿಗೆ ಮೀಸಲಾದ ವೇದಿಕೆ. ಇಲ್ಲಿಗೆ ಇನ್ನಿತರ ಕ್ಷೇತ್ರದ ಸಾಧಕರನ್ನು ಕರೆಸಿ ಕೂರಿಸಿದರೆ ಸಾಹಿತಿಗಳಿಗೆ ದಕ್ಕಬೇಕಾದ ಪರಮೋಚ್ಛ ಗೌರವವೊಂದು ಕಳೆದುಹೋಗುತ್ತದೆಂದು ಸಾಹಿತ್ಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಈ ಕುರಿತು ಸಾಹಿತ್ಯಪ್ರಿಯರು ಜಾಲತಾಣಗಳಲ್ಲಿ ತಮ್ಮ ಅನಿಸಿಕೆ ಪ್ರಕಟಿಸಿ ವಿರೋಧ ಸೂಚಿಸುತ್ತಿದ್ದಾರೆ.
ಕನ್ನಡದ ಸಾಹಿತಿಗಳಲ್ಲದ ಸಾಧಕರು ಕನಿಷ್ಠರು, ಸಾಹಿತಿಗಳೇ ಶ್ರೇಷ್ಠರೆಂಬ ವಾದ ಇದಲ್ಲ. ಸಾಹಿತ್ಯೇತರರಿಗೆ ವಿಶ್ವ ಸಮ್ಮೇಳನ ಸಹಿತ ಇನ್ನಿತರ ಅನೇಕ ವೇದಿಕೆಗಳಿವೆ. ಆದರೆ ಸಾಹಿತ್ಯ ಸಮ್ಮೇಳನಗಳು ಸಾಹಿತಿ ಮತ್ತು ಸಾಹಿತ್ಯಕ್ಕೆ ಸೀಮಿತವಾಗಿರಬೇಕೆಂದು ಅಭಿಪ್ರಾಯ ಸಾಹಿತಿಗಳದ್ದು.
ಹಿಂದೆ ಸಾಹಿತ್ಯ ಸಮ್ಮೇಳನಗಳಿಗೆ ಘನತೆ, ಗೌರವಗಳಿತ್ತು. ಆದರೆ ಬರಬರುತ್ತಾ ಅದೂ ಕೂಡಾ ರಾಜಕೀಯ ಸ್ವಾಧೀನದ ವೇದಿಕೆಯಂತಾಗಿ ಕಾಣತೊಡಗಿದ್ದು, ಸಾಹಿತ್ಯಕ್ಕಿಂತ ಸಾಹಿತ್ಯೇತರ ವಿಚಾರಗಳೇ ಮೊಳಗುವುದು ನಾಡು, ನುಡಿ ವಿಚಾರದಲ್ಲಿ ಸ್ಪಂದಿಸಬೇಕಾದ ವಿಷಯವೆಂದು ಅಭಿಪ್ರಾಯ ಮೊಳಗತೊಡಗಿದೆ.
ಪ್ರಸ್ತುತ ಕಾಲಘಟ್ಟ ಬದಲಾಗಿದೆ. ಕನ್ನಡ ನಾಡಿನಲ್ಲೇ ಕನ್ನಡ ಭಾಷೆ, ಸಾಹಿತ್ಯ ಪ್ರೀತಿ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ನಡೆಯುವ ಸಮ್ಮೇಳನಕ್ಕೆ ವರ್ತಮಾನದ ಬದ್ಧತೆ, ಭವಿಷ್ಯದ ಭಧ್ರತೆಯ ಚಿಂತನೆಗಳು ಬೇಕು. ಜತೆಗೆ ಸರಕಾರಕ್ಕೆ ಸಾಹಿತ್ಯ ಸಮ್ಮೇಳನ ನಡೆಸಲೇಬೇಕೆಂಬ ಆಸಕ್ತಿಯೂ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆಯ ನಿರ್ಣಯವಾಗಬೇಕೆಂದು ಅಭಿಪ್ರಾಯಗಳು ಮೂಡುತ್ತಿವೆ.