ಅನಂತಪುರ ಸರೋವರ ಕ್ಷೇತ್ರ ಪರಿಸರಕ್ಕೆ ಭವಿಷ್ಯದ ಆತಂಕ: ಅನಂತಪುರ ಗುಡ್ಡದಿಂದ ಅವ್ಯಾಹತ ಕೆಂಪುಮುರಕಲ್ಲು ಸಾಗಾಟ-ಭೀತಿ

by Narayan Chambaltimar

ಕಣಿಪುರ ಸುದ್ದಿಜಾಲ

ಕುಂಬಳೆ ಸಮೀಪದ ನಿಸರ್ಗ ರಮಣೀಯ ಏಕೈಕ ಸರೋವರ ಕ್ಷೇತ್ರ ಅನಂತಪುರ ದೇವಾಲಯ ಮತ್ತು ಪರಿಸರ ಪ್ರದೇಶಕ್ಕೆ ಭವಿಷ್ಯದಲ್ಲಿ ಪ್ರಾಕೃತಿಕ ದುರಂತಗಳ ಅನಾಹುತ ಕಾದಿದೆ ಎಂದು ಸ್ಥಳೀಯ ಭಕ್ತರು ಮತ್ತು ನಾಗರಿಕರು ಆತಂಕಗೊಂಡಿದ್ದಾರೆ.
ಅನಂತಪುರ ಪರಿಸರವನ್ನು ಕೇರಳ ಸರಕಾರ ಕೈಗಾರಿಕಾ ಪ್ರದೇಶವೆಂದು ಘೋಷಿಸಿದ್ದು, ಇದರ ಮರೆಯಲ್ಲಿ ಈ ಪ್ರದೇಶದ ಗುಡ್ಡವನ್ನುಅಗೆದು, ಅಳತೆಗೂ ಮೀರಿದ ಕೆಂಪು ಕಲ್ಲು ಅವ್ಯಾಹತವಾಗಿ ಸಾಗಿಸಲಾಗುತ್ತಿದೆ.

ಮಲಬಾರ್ ಸಿಮೆಂಟ್ಸ್ ಮತ್ತು ಚೆಟ್ಟಿನಾಡ್ ಸಿಮೆಂಟ್ಸ್ ಹೆಸರಲ್ಲಿ ಪರವಾನಿಗೆ ಹೊಂದಿರುವವರು ದೊರೆತಿರುವ ಅನುಮತಿಯಲ್ಲಿ ಉಲ್ಲೇಖಿತ ಪರವಾನಿಗೆಯ ಅಳತೆಗೂ ಮೀರಿ ಭಾರೀ ಪ್ರಮಾಣದ ಕೆಂಪು ಕಲ್ಲು, ಮಣ್ಣನ್ನು ಅವ್ಯಾಹತವಾಗಿ ರಾತ್ರಿ ಹಗಲೆನ್ನದೇ ಸಾಗಿಸುತ್ತಿದ್ದಾರೆ.
ಅಲ್ಲದೇ ಈ ಜಾಗದಲ್ಲೇ ಕಲ್ಲು ಕೊರೆಯುವ ಕಾರ್ಖಾನೆಯೂ ತಲೆ ಎತ್ತಿದೆ. ಇದರ ಹಿಂದೆ ಮಾಫಿಯಾ ಕೈವಾಡ ಇದ್ದು , ಆಡಳಿತವರ್ಗದ ಒತ್ತಾಸೆಯಿಂದಲೇ ದಂಧೆ ನಡೆಯುತ್ತಿದೆಯೆಂದು ನಾಗರಿಕರು ಶಂಕೆಗೊಂಡು, ಅಳಲು ತೋಡುತ್ತಿದ್ದಾರೆ.

ಬೆಟ್ಟವನ್ನೇ ಕೊರೆಯುವ ಈ ಪ್ರಕ್ರಿಯೆಯಿಂದಾಗಿ ಭವಿಷ್ಯದಲ್ಲಿ ನಿಸರ್ಗ ರಮಣೀಯ ಅನಂತಪುರದ ಸುತ್ತ ಪ್ರಾಕೃತಿಕ ದುರಂತಗಳು ಸಂಭವನೀಯವೆಂಬುದು ಜನರ ಆತಂಕ.
ಈ ಕುರಿತಾದ ದೂರನ್ನು ಜಿಲ್ಲಾಡಳಿತಕ್ಕೆ ಈಗಾಗಲೇ ಸಲ್ಲಿಸಿದರೂ ಕಾನೂನು ಕ್ರಮಗಳೇನೂ ಜರಗುತ್ತಿಲ್ಲ ಎಂದು ನಾಗರಿಕರು ಹೇಳುತ್ತಾರೆ.
ಗಡಿನಾಡಿನ ವಿಟ್ಲ ಪರಿಸರ, ಬಾಯಾರು ಸಮೀಪದ ಪಾದೇಕಲ್ಲು , ಪೆರುವೋಡಿ ಪ್ರದೇಶ ಮತ್ತು ಅನಂತಪುರ ಗುಡ್ಡೆಯಿಂದ ಕೆಂಪುಕಲ್ಲು ಮತ್ತು ಮಣ್ಣನ್ನು ಸಾಗಿಸಲಾಗುತ್ತಿದೆ. ಅನಿಯಂತ್ರಿತವಾಗಿ ಅನೈಸರ್ಗಿಕ ವಿಧಾನದಲ್ಲಿ ಭೂಮಿಯ ಮುರಪಾದೆ ಕಲ್ಲನ್ನು ಮುರಿಯುವುದರಿಂದಾಗಿ ಭವಿಷ್ಯದಲ್ಲಿ ಈ ಭಾಗದಲ್ಲಿ ಪ್ರಾಕೃತಿಕ ದುರಂತಗಳು ಸಂಭವನೀಯವೆಂದು ನಾಗರಿಕರು ಪ್ರಕಟಿಸುವ ಆತಂಕಕ್ಕೆ ಆಡಳಿತವರ್ಗ ಉತ್ತರಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
ಪ್ರಕೃತಿ ಶೋಷಿಸಿ, ನಿಸರ್ಗ ಸೌಂದರ್ಯವನ್ನು ಕೆಡಿಸಿ ತಲೆ ಎತ್ತುವ ಕೈಗಾರಿಕಾ ಅಭಿವೃದ್ಧಿಯ ನಡುವಲ್ಲೇ ದಕ್ಷಿಣ ಭಾರತದ ಏಕೈಕ ಮೊಸಳೆ ವಾಸಿಸುವ ಅನಂತಪುರ ಸರೋವರ ಕ್ಷೇತ್ರವಿದೆ. ತಿರುವನಂತಪುರದ ಮೂಲಸ್ಥಾನವಾದ ಶ್ರೀ ಕ್ಷೇತ್ರ ಪರಿಸರವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿ, ಈ ಪರಿಸರವನ್ನು ಸಂರಕ್ಷಿಸಬೇಕೆಂದು ಜನಾಗ್ರಹವಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00