ಕಣಿಪುರ ಸುದ್ದಿಜಾಲ
ಕೊಚ್ಚಿ: (ಸೆ.1)
ಮಲಯಾಳಂ ಸಿನಿಮಾರಂಗದ ಸೂಪರ್ ಸ್ಟಾರ್, ನಟ ಮೋಹನ್ ಲಾಲ್ ಬೆನ್ನಲ್ಲೇ ಮತ್ತೋರ್ವ ಸೂಪರ್ ಸ್ಟಾರ್ ಮಮ್ಮುಟ್ಟಿ ಕೂಡಾ ಚಿತ್ರರಂಗವನ್ನು ಅಲ್ಲೋಲಕಲ್ಲೋಲ ಗೊಳಿಸಿದ ನಟಿಯರ ಮೇಲಣ ಲೈಂಗಿಕ ದೌರ್ಜನ್ಯ ಆಪಾದನೆಗಳ ವಿರುದ್ದ ಇದೇ ಮೊದಲ ಬಾರಿಗೆ ಮೌನ ಮುರಿದು ಪ್ರತಿಕ್ರಿಯೆ ನೀಡಿದ್ದಾರೆ.ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಅವರು ಜಾಣನಡೆಯ ಹೇಳಿಕೆಗಳನ್ನಿತ್ತಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಶಕ್ತಿ ಕೇಂದ್ರಗಳಿಲ್ಲ. ಚಿತ್ರೋದ್ಯಮವನ್ನು ಯಾವ ಶಕ್ತಿ ಕೇಂದ್ರಗಳೂ ಆಳುತ್ತಿಲ್ಲ.ಅಂಥ ಆಳ್ವಿಕೆಗೆ ಇಲ್ಲಿ ಅವಕಾಶ, ಪ್ರಸಕ್ತಿ ಇಲ್ಲ. ಪ್ರಸ್ತುತ ಸಿನಿಮಾ ರಂಗಕ್ಕೆ ಕಳಂಕವನ್ನುಂಟುಮಾಡಿದ ಸರಣಿ ಆಪಾದನೆಗಳ ವಿರುದ್ದ ಚಿತ್ರರಂಗದ ಸಂಘಟನೆ ಮತ್ತದರ ಪದಾಧಿಕಾರಿಗಳು ಮೊದಲು ಮಾತಾಡಬೇಕೇ ಹೊರತು ನಾಯಕ ನಟರುಗಳಲ್ಲ.
ಇದು ಸಿನಿಮಾ ರಂಗದ ಎಲ್ಲಾ ಸಂಘಟನೆ, ಕಲಾವಿದರು ಒಗ್ಗಟ್ಟಿನಿಂದ ಇರಬೇಕಾದ ಕಾಲವೇ ಹೊರತು ಕೆಸರೆರಚಾಡುವ ಸಮಯ ಅಲ್ಲ ಎಂದವರು ಫೇಸ್ಬುಕ್ ನಲ್ಲಿ ಬರೆದರು.
ಸಿನಿಮ ಎಂಬುದು ಸಮಾಜದ ಪ್ರತಿಬಿಂಬ. ಅದನ್ನು ಸಮಾಜ ಸಸೂಕ್ಷ್ಮ ಗಮನಿಸುತ್ತದೆ. ಕಲಾವಿದರನ್ನು ಆದರಾಭಿಮಾನದಿಂದ ಗೌರವಿಸುತ್ತದೆ. ಇಂತಿರುವಾಗ ಕಲಾವಿದರು ಕೂಡಾ ಸಮಾಜಕ್ಕೆ ಮಾದರಿಯಾಗಿ ಪ್ರಬುದ್ಧತೆಯಿಂದ ವರ್ತಿಸಬೇಕು. ಪ್ರಸ್ತುತದ ಬೆಳವಣಿಗೆಗಳ ಕುರಿತು ಸರಕಾರವೇ ನಿಯೋಗಿಸಿದ ಜಸ್ಟೀಸ್ ಹೇಮಾ ಸಮಿತಿ ಆಯೋಗದ ವರದಿಯನ್ನು ನಾನು ಸ್ವಾಗತಿಸುತ್ತೇನೆ. ಅದರ ಪೂರ್ಣರೂಪ ಹೈಕೋರ್ಟಿನಲ್ಲಿದೆ. ಈ ಕುರಿತು ಕೋರ್ಟು ಮತ್ತು ಪೋಲೀಸರು ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಿ, ಚಿತ್ರರಂಗದ ಕಳಂಕ ನೀಗಲಿ ಎಂದು ಮಮ್ಮುಟ್ಟಿ ಉಲ್ಲೇಖಿಸಿದ್ದಾರೆ.
ಜಸ್ಟೀಸ್ ಹೇಮಾ ಕಮಿಟಿ ವರದಿಯಲ್ಲಿ ದೂರುಗಳಷ್ಟೇ ಅಲ್ಲ ಪರಿಹಾರ ಮಾರ್ಗೋಪಾಯದ ಸಲಹೆಯೂ ಇದೆ. ಅದರ ಅನುಷ್ಠಾನಕ್ಕೆ ಒತ್ತಾಯಿಸೋಣ ಎಂದು ಉಲ್ಲೇಖಿಸಿದ ಮಮ್ಮುಟ್ಟಿ ಮಾಧ್ಯಮಗಳ ಕಣ್ಣಿಗೆ ಬೀಳದೇ ಫೇ.ಬು.ಮೂಲಕವಷ್ಟೇ ಪ್ರತಿಕ್ರಿಯೆ ನೀಡಿರುವುದೂ ನಾಡಿನಲ್ಲಿ ಚರ್ಚೆಗೆಡೆಯಾಗಿದೆ.
ಈಗ ಮಲಯಾಳಂ ಚಿತ್ರರಂಗವೇ ನಟಿಯರ ಸಾಲು, ಸಾಲು ಆಪಾದನೆಗಳಿಂದ ಕಳಂಕಿತವಾಗಿದೆ. ಈ ಸಂದರ್ಭ ಸ್ಟಾರ್ ನಟರು ತಮ್ಮ ಜವಾಬ್ದಾರಿಗಳಿಂದ ಪಲಾಯನಗೈದು ಅವಿತಿದ್ದಾರೆಂದು ನಟಿಯರು,ಅಭಿಮಾನಿಗಳು, ನೆಟ್ಟಿಗರು ಜಾಲತಾಣದಲ್ಲಿ ಆಕ್ರೋಶ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ನಟ ಮಮ್ಮಟ್ಟಿ ಮಾಧ್ಯಮಗಳ ಮುಂದೆ ಕಾಣಿಸದೇ ಹೇಳಿಕೆ ಇತ್ತದ್ದು ಚರ್ಚಾಸ್ಪದವಾಗಿದೆ.