ಕಣಿಪುರ ಡಿಜಿಟಲ್ ಡೆಸ್ಕ್
ಕುಂಬಳೆ (ಆ.31)
ಉತ್ತರ ಕನ್ನಡದ ಶಿರೂರಿನಲ್ಲಿ ನಡೆದ ಭೂಕುಸಿತದಲ್ಲಿ ಲಾರಿ ಸಹಿತ ಗಂಗಾವಳಿ ಹೊಳೆಯಲ್ಲಿ ನಾಪತ್ತೆಯಾದ ಚಾಲಕ ಕೇರಳದ ಅರ್ಜುನ್ ನ ಪತ್ನಿಗೆ ಕೇರಳ ಸರಕಾರ ಸರಕಾರಿ ಉದ್ಯೋಗ ಕೊಡಿಸಿ ಆದೇಶ ಹೊರಡಿಸಿದೆ.
ಕೋಝಿಕ್ಕೋಡ್ ಕಣ್ಣಾಡಿಕ್ಕಲ್ ನಿವಾಸಿ ಅರ್ಜುನ್ ಪತ್ನಿ ಕೃಷ್ಣಪ್ರಿಯ ಅವರಿಗೆ ವೇಂಙರಿ
ಸಹಕಾರಿ ಬೇಂಕಿನಲ್ಲಿ ಜ್ಯೂನಿಯರ್ ಕ್ಲರ್ಕ್/ಕ್ಯಾಷಿಯರ್ ಹುದ್ದೆ ನೀಡಲಾಗಿದೆ.
ಸಾಮಾಜಿಕ ಬದ್ಧತೆಯ ಹಿನ್ನೆಲೆಯಲ್ಲಿ ಕಾನೂನು ಸಡಿಲಿಕೆ ಮಾಡಿ ಈ ಹುದ್ದೆ ನೀಡಲಾಗಿದೆ ಎಂದು ಸಚಿವ ವಿ. ಎನ್. ವಾಸವನ್ ತಿಳಿಸಿದ್ದಾರೆ.
ಜುಲೈ 19ರಂದು ಶಿರೂರಿನಲ್ಲಿ ಭೂಕುಸಿತ ನಡೆದು ಕೇರಳದ ಅರ್ಜುನ್ ಲಾರಿ ಸಹಿತ ಧುಮ್ಮಿಕ್ಕಿ ಹರಿಯುವ ಗಂಗಾವಳಿ ಹೊಳೆಯ ಪಾಲಾಗಿದ್ದರು. ಬಳಿಕ ತೀವ್ರ ಹುಡುಕಾಟಗಳು ನಡೆದುವಾದರೂ ಅರ್ಜುನ್ ಸುಳಿವು ಸಿಗಲಿಲ್ಲ.ಅರ್ಜುನನಿಗಾಗಿ ಹುಡುಕಾಟ ಉಪೇಕ್ಷಿಸದೇ ಡ್ರಜರ್ ಬಳಸಿ ಶೋಧ ಕಾರ್ಯ ನಡೆಯಲಿದೆ.
ಲಾರಿ ಚಾಲಕ ಅರ್ಜುನ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬದ ಆಧಾರ ಸ್ತಂಭವೇ ಕುಸಿದು, ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಬದ್ಧತೆ ಪರಿಗಣಿಸಿ ಅವರ ಪತ್ನಿಗೆ ಉದ್ಯೋಗ ನೀಡಲಾಗಿದೆ.ಈ ನಡುವೆ ಶಿರೂರಿನಲ್ಲಿ ಮತ್ತೆ ಗುಡ್ಡ ಜರಿದು ಮಣ್ಣು ಕುಸಿತವಾಗಿದೆ. ಇದು ಜನರಲ್ಲಿ ಆತಂಕ ಮೂಡಿಸಿದರೂ ಅಪಾಯಗಳೇನೂ ಸಂಭವಿಸಿಲ್ಲ. ಈ ದಾರಿಯೀಗ ಸಂಚಾರ ಮುಕ್ತವಾಗಿದೆ.
ರಸ್ತೆಯ ಮೇಲೆ ರಾಶಿಬಿದ್ದ ಮಣ್ಣನ್ನು ಸತತ 15ದಿನಗಳಿಂದ ತೆರವುಗೊಳಿಸಲಾಗಿದೆ.