ಕಣಿಪುರ ಸುದ್ದಿಜಾಲ
ತಿರುವನಂತಪುರ: ನಿಮ್ಮ ಈ ಮೋಹನ್ ಲಾಲ್ ಎಲ್ಲಿಗೂ ಓಡಿ ಹೋಗಿಲ್ಲ, ಅವಿತು ಕುಳಿತಿಲ್ಲ ಎಂದೇ ಮಾಧ್ಯಮಗಳ ಮುಂದೆ ಮಾತನ್ನಾರಂಭಿಸಿದ ಸೆಲೆಬ್ರಿಟಿ ನಟ ಮೋಹನ್ ಲಾಲ್ ಮಲಯಾಳಂ ಸಿನಿಮಾ ರಂಗದಲ್ಲಿ ಕೋಲಾಹಲವನ್ನೆಬ್ಬಿಸಿರುವ ಸ್ತ್ರೀ ಶೋಷಣೆಯ ಲೈಂಗಿಕ ದೌರ್ಜನ್ಯ ಆಪಾದನೆಗಳ ವಿರುದ್ದ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.ತಿರುವನಂತಪುರದಲ್ಲಿ ಕೇರಳ ಕ್ರಿಕೆಟ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕಿಕ್ಕಿರಿದ ಮಾಧ್ಯಮಗಳ ಪ್ರಶ್ನಾ ಸುರಿಮಳೆಗೆ ಶಾಂತಿ, ಸಂಯಮದ ಉತ್ತರ ಹೇಳಿದರು.
ನಾನು 47ವರ್ಷಗಳಿಂದ ಮಲಯಾಳಂ ಸಿನಿಮೋದ್ಯಮದಲ್ಲಿದ್ದೇನೆ. ಇಂಥಹ ದೌರ್ಬಾಗ್ಯಕರ ವಿಷಯಗಳ ಸಂಧಿಗ್ಧತೆ ಇದೇ ಮೊದಲು. ಈಗ ಮಲಯಾಳಂ ಸಿನಿಮರಂಗವನ್ನು ಕಾಡಿರುವ ಲೈಂಗಿಕ ಆರೋಪಗಳಿಗೆಲ್ಲ “ಅಮ್ಮ” ಉತ್ತರಿಸಬೇಕೆಂದು ಬಯಸುವುದೇ ಸರಿಯಲ್ಲ. ‘ಅಮ್ಮ ಸುಮಾರು 600ಕಲಾವಿದರು ಸೇರಿ ರೂಪಿಸಿಕೊಂಡ ಕಲಾವಿದರ ಖಾಸಗಿ ಕ್ಷೇಮದ ಸಂಘಟನೆ. ಅದು ಟ್ರೇಡ್ ಯೂನಿಯನ್ ಸ್ವರೂಪದ್ದಲ್ಲ. ಆದ್ದರಿಂದ ಈಗಿನ ಬಿಕ್ಕಟ್ಟು, ಸಮಸ್ಯೆಗಳಿಗೆ ಇಡೀ ಚಿತ್ರರಂಗ ಒಟ್ಟಾಗಿ ಉತ್ತರಿಸಬೇಕು. ಸಿನಿಮದಲ್ಲಿ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಸಹಿತ 21ರಷ್ಟು ಸಂಘಟನೆಗಳಿವೆ. ಇವರೆಲ್ಲರಿಗೂ ಈ ಜವಾಬ್ದಾರಿ ಇದೆ. ಹಾಗೆಂದು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ನಾನು ನಿರಾಕರಿಸುವುದಿಲ್ಲ,ಇಂಥದ್ದೆಲ್ಲ ನಡೆಯಬಾರದಿತ್ತು ಎಂದು ಮೋಹನ್ ಲಾಲ್ ವಿಷಾದ ಪ್ರಕಟಿಸಿದರು.ಪಲಾಯನ ಮಾಡಿಲ್ಲ..
——————-
ಅಮ್ಮ ಅಧ್ಯಕ್ಷ ಸ್ಥಾನ ತ್ಯಜಿಸಿ ನಾನು ಪಲಾಯನಗೈದ ರೀತಿಯ ವರದಿಗಳನ್ನು ಗಮನಿಸಿದೆ. ಇದು ಸರಿಯಲ್ಲ. ಈ ಪ್ರಕರಣಗಳೆಲ್ಲ ವರದಿಯಾಗುವ ವೇಳೆಗೆ ನಾನು ಕೇರಳದಲ್ಲಿರಲಿಲ್ಲ. ಒಂದೆರಡು ಶೂಟಿಂಗ್ ನಡೆಯುತಿತ್ತು. ಜತೆಯಲ್ಲೇ ಪತ್ನಿಯ ಅನಾರೋಗ್ಯದ ಚಿಕಿತ್ಸೆ ಹೊರರಾಜ್ಯದಲ್ಲಿ ನಡೆಯುತಿತ್ತು. ವಿಪರೀತ ಒತ್ತಡದಲ್ಲಿದ್ದೆ. ಸದ್ಯ ಉಂಟಾಗಿರುವ ವಿವಾದದ ಕಾರಣದಿಂದಲೇ ಸಿನಿಮಾ ರಂಗ ತಲ್ಲಣಿಸಿದೆ. ಈ ಕಾರಣದಿಂದಲೇ ನನ್ನ ಒಂದೆರಡು ಸಿನಿಮಾ ರಿಲೀಸ್ ಮುಂದೂಡಿದ್ದೇನೆ ಎಂದರು ಮೋಹನ್ ಲಾಲ್.ಹೇಮಾ ಕಮಿಷನ್ ವರದಿಗೆ ಸ್ವಾಗತ
——————–
ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆಯೇ ಎಂದು ತನಿಖೆ ನಡೆಸಿದ ಹೇಮಾ ಕಮಿಷನ್ ವರದಿಯನ್ನು ನಾನು ಸ್ವಾಗತಿಸುತ್ತೇನೆ.
ಈ ಕಮೀಷನ್ ಮುಂಭಾಗ ನಾನೂ ಕೂಡಾ ಎರಡು ಸಲ ಹಾಜರಾಗಿ ನನಗೆ ಗೊತ್ತಿರುವ ವಿಷಯದ ಹೇಳಿಕೆ ನೀಡಿದ್ದೇನೆ.
ಮಲಯಾಳಂ ಸಿನಿಮ ಕ್ಷೇತ್ರ ನಮ್ಮ ಬದುಕಿನ ಒಂದು ಪುಟ್ಟ ಭಾಗ. ಅಲ್ಲಿ ಮಾತ್ರವೇ ಮಹಿಳಾ ಅಸುರಕ್ಷತೆಯಲ್ಲ. ಸಮಾಜದ ಎಲ್ಲಾ ರಂಗದಲ್ಲೂ ನಡೆಯುವಂತಾದ್ದೇ ಇಲ್ಲೂ ನಡೆದಿದೆ. ಹಾಗೆಂದು ನನ್ನ ಸಮರ್ಥನೆಯಲ್ಲ. ಹೇಮಾ ಕಮಿಷನ್ ವರದಿಯನ್ವಯ ಚಿತ್ರರಂಗಕ್ಕೆ ಉಂಟಾದ ಕಳಂಕ ತೊಳೆದು ಹೋಗಲಿ, ಸಿನಿಮಾ ರಂಗ ಸ್ವಚ್ಛವಾಗಲಿ ಎಂದರು ಮೋಹನ್ ಲಾಲ್.
ನಿಮ್ಮಂತೆ ಮಾತಾಡಿ ಗೊತ್ತಿಲ್ಲ!
————————-
ನನಗೆ ಮಾಧ್ಯಮಗಳ ಮುಂದೆ ನಿಮ್ಮ ರೀತಿಯಲ್ಲೇನೂ ಮಾತಾಡಿ ಗೊತ್ತಿಲ್ಲ. ಆ ರೀತಿಯ ಮಾತು ನನಗೊಲಿಯದು. ನನಗೆ ತಿಳಿದ ವಿಚಾರಗಳನ್ನಷ್ಟೇ ನಾನು ಹೇಳಬಲ್ಲೆ ಎಂದರು.