ಕಣಿಪುರ ಸುದ್ದಿ ಜಾಲ
ಕಾಸರಗೋಡು(ಆ.30)
ದೇಶದ ಪರಂಪರಾಗತ ಕಲೆಗಳನ್ನು ಹೊಸ ಪೀಳಿಗೆಗೆ ಕೈ ದಾಟಿಸಲು ಕೇಂದ್ರ ಸಂಗೀತ ನಾಟಕ ಅಕಾಡೆಮಿ ದೇಶದ 30ಕ್ಕೂ ಅಧಿಕ ಸಾಂಪ್ರದಾಯಿಕ ಕಲಾ ತಜ್ಞರಿಗೆ ಗುರು ಮಾನ್ಯತೆಯ ಕಲಾ ದೀಕ್ಷೆ ನೀಡಿದೆ.
ಇದರಲ್ಲಿ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟದ ಏಕೈಕ ತಂಡವಾದ ಕಾಸರಗೋಡಿನ ಕೆ.ವಿ. ರಮೇಶ್ ಸಾರಥ್ಯದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ತಂಡವೂ ಒಳಗೊಂಡಿದೆ. ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಅವರು ಕೆ.ವಿ. ರಮೇಶ್ ಸಹಿತ ಆಯ್ದ ತಜ್ಞ ಕಲಾವಿದರನ್ನು ಸನ್ಮಾನಿಸಿ ಸಂಗೀತ ನಾಟಕ ಅಕಾಡೆಮಿಯ ಗುರುದೀಕ್ಷಾ ಅಂಗೀಕಾರದೊಂದಿಗೆ ಸರ್ಟಿಫಿಕೇಟು ನೀಡಿ ಪುರಸ್ಕರಿಸಿ ಎಳೆಯರಿಗೆ ಕಲಾ ತರಬೇತಿ ನೀಡಲು ಆದೇಶಿಸಿದರು.
ಈ ಹಿನ್ನೆಲೆಯಲ್ಲಿ ಗುರು ಪರಂಪರಾ ಯೋಜನೆಯಂತೆ ಆಯ್ದ 10 ಮಕ್ಕಳಿಗೆ ಕಾಸರಗೋಡಿನ ಪಿಲಿಕುಂಜೆಯ ಯಕ್ಷಪುತ್ಥಳಿ ಗೊಂಬೆಮನೆಯ ಮ್ಯೂಸಿಯಂ ನಲ್ಲಿ ಗೊಂಬೆಯಾಟದ ಪ್ರಾಥಮಿಕ ತರಬೇತಿ ನೀಡಲಾಗುತ್ತಿದೆ.
ಗೊಂಬೆಯಾಟದಂತಹ ಸಾಂಪ್ರದಾಯಿಕ ಕಲೆ ನಾಶವಾಗದೇ ಹೊಸ ಪೀಳಿಗೆಗೂ ಕೈ ದಾಟಬೇಕೆನ್ನುವ ಕಳಕಳಿಯಿಂದ ಸಂಗೀತ ನಾಟಕ ಅಕಾಡೆಮಿ ಪ್ರಾಯೋಜಿತ ತರಬೇತಿ ಶಿಬಿರ ನಡೆಯುತ್ತಿದೆ.
ದೇಶದಾದ್ಯಂತ ಎಲ್ಲಾ ರಾಜ್ಯಗಳಿಂದ ಆಯ್ದ 30ಕ್ಕೂ ಅಧಿಕ ಕಲೆಗಳಲ್ಲಿ ಇಂತಹ ಶಿಬಿರ ನಡೆಯುತ್ತಿದ್ದು, ಇದರಿಂದಾಗಿ ಹೊಸ ಕಲಾವಿದರ ಉಗಮ ನಿರೀಕ್ಷೆ ಮಾಡಲಾಗಿದೆ.
“ಯಕ್ಷಗಾನ ಗೊಂಬೆಯಾಟ ಸುಲಭದಲ್ಲಿ ಒಲಿಯುವ ಕಲೆಯಲ್ಲ. ಇದು ಒಲಿಯಬೇಕಿದ್ದರೆ ನಿರಂತರ ಅಭ್ಯಾಸ ಮತ್ತು ಕಲೆಯ ಅರಿವು ಎರಡೂ ಮೈಗೂಡಬೇಕೆನ್ನುತ್ತಾರೆ ತೆಂಕಣ ಯಕ್ಷಗಾನದ ಏಕೈಕ ಗೊಂಬೆಯಾಟ ಮಂಡಳಿಯ ಸೂತ್ರದಾರಿ ಕೆ.ವಿ. ರಮೇಶ್.
ವಾರಕ್ಕೊಮ್ಮೆ ನಡೆಯುವ ಒಂದು ವರ್ಷದ ಶಿಬಿರದಿಂದ ಮಾತ್ರ ಗೊಂಬೆಯಾಟ ಕಲಿಯಲಾಗದು. ನಿರಂತರ ಅಭ್ಯಾಸದ ಜತೆಗೆ ಪ್ರದರ್ಶನದಲ್ಲೂ ಪಾಲ್ಗೊಂಡರೆ ಮಾತ್ರವೇ ಪರಿಣತಿ ಸಾಧ್ಯ. ಈ ದೃಷ್ಟಿಯಲ್ಲಿ ನಾವು ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಾಲಪಾಠ, ಬಾಯ್ತಾಳ, ಬಿಡ್ತಿಗೆ, ಮುಕ್ತಾಯ, ಪ್ರವೇಶ ಕ್ರಮ ಇತ್ಯಾದಿಗಳ ಜತೆ ಸೂತ್ರದಲ್ಲಿ ಗೊಂಬೆ ಕುಣಿಸಲು ಕಲಿಸುತ್ತಿದ್ದೇವೆ. ಈ ವಿದ್ಯಾರ್ಥಿಗಳನ್ನು ನಮ್ಮ ಪ್ರದರ್ಶನದಲ್ಲೂ ಪಾಲ್ಗೊಳ್ಳಿಸುತ್ತಿದ್ದೇವೆ ಎಂದರು ಕೆ.ವಿ. ರಮೇಶ್..ಇದು ಕಲಾಜಾಗೃತಿಯ ಕಾಯಕ..
——————–
ಈ ವಿದ್ಯಾರ್ಥಿಗಳೆಲ್ಲ ಭವಿಷ್ಯದಲ್ಲಿ ಗೊಂಬೆಯಾಟ ಮಾಡುತ್ತಾರೆಂದು ಹೇಳಲಾಗದು. ಆದರೆ ಅವರಲ್ಲಿ ಕಲೆಯ ಅರಿವು ಮೂಡಿ, ಕಲಾಜಾಗೃತಿಯಾಗುತ್ತದೆ. ನೂರು ಬೀಜ ಬಿತ್ತಿದಾಗ ಒಂದಾದರೂ ಆರೋಗ್ಯವಂತ ಗಿಡ ಟಿಸಿಲೊಡೆದು ಬರುವಂತೆಯೇ ಭವಿಷ್ಯದಲ್ಲಿ ಗೊಂಬೆಯಾಟಕ್ಕೂ ಕಲಾವಿದರು ಉದಿಸಿ ಬರುವರೆಂದೇ ನಿರೀಕ್ಷೆ ಎಂದರು ಕೆ.ವಿ.ರಮೇಶ್.