✍️ ಎಂ.ನಾ. ಚಂಬಲ್ತಿಮಾರ್
ಕನ್ನಡ ನಾಡಿನುದ್ದಗಲ ಗಮಕಿಗಳ ಕಂಠಮಾಧುರ್ಯದಿಂದ ಜೀವಂತವಾಗಿರುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕಾವ್ಯಕ್ಕೆ ಭರತನೃತ್ಯದ ನಾಟ್ಯಭಾವದಲ್ಲಿ ನವಜೀವವನ್ನಿತ್ತು ಮೈಸೂರಿನ ಮನಗೆದ್ದಿದ್ದಾರೆ ಅಧ್ಯಯನಶೀಲ ನರ್ತಕಿ ಭ್ರಮರಿ ಶಿವಪ್ರಕಾಶ್.
ನೃತ್ಯ ಮತ್ತು ನಾಟ್ಯ ಸಾಧ್ಯತೆಗಳ ಅಧ್ಯಯನವನ್ನೇ ಬದುಕಾಗಿಸಿಕೊಂಡು, ದಶಕಗಳಿಂದ ಪ್ರಯೋಗಶೀಲ ನೃತ್ಯಾವಿಷ್ಕಾರ ಮಾಡುತ್ತಲೇ ಬಂದಿರುವ ಅವರು ಇತ್ತೀಚೆಗೆ ಮೈಸೂರಿನ ಗಾನ ಭಾರತಿಯಲ್ಲಿ ಆಹ್ವಾನದ ಮೇರೆಗೆ ಈ ವಿಶೇಷ ಪ್ರದರ್ಶನವಿತ್ತರು.
ಭರತನಾಟ್ಯದಲ್ಲಿ ಭಾರತೀಯ ಸನಾತನ ಕಾವ್ಯ ಪ್ರಯೋಗಗಳನ್ನು ಮಾಡುವ ಉದ್ದೇಶದಿಂದ ಮಂಗಳೂರಿನಲ್ಲಿ ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆ ಸ್ಥಾಪಿಸಿರುವ ಭ್ರಮರಿಯವರು 2011ರಲ್ಲಿ ಪ್ರಪ್ರಥಮ ಬಾರಿಗೆ ಈ ಮಹಾಕಾವ್ಯದ ನೃತ್ಯ ಪ್ರಯೋಗ ಮಾಡಿದ್ದರು.
ಏಕಕಾಲಕ್ಕೆ ಮನೋರಂಜನೆಯೊಂದಿಗೆ ನಾಟ್ಯದ ಬಂಧ ವೈಶಿಷ್ಠ್ಯವನ್ನು ಕಥನಕಾವ್ಯದಲ್ಲಿ ಭಾವಾತ್ಮಕವಾಗಿ ನಿರೂಪಿಸುವ ಅವರ ಈ ಸಂಶೋಧನೀಯ ಪ್ರಯೋಗ ಕಲಾತಜ್ಞರಿಂದ ಪ್ರಶಂಸೆ ಪಡೆದಿತ್ತು. ಪರಿಣಾಮ ನಾಡಿನ ಹಲವೆಡೆ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಇದನ್ನು ಪ್ರದರ್ಶಿಸುವ ಸುಯೋಗ ಒದಗಿ ಬಂತು.
ಕುಮಾರವ್ಯಾಸ ಭಾರತವನ್ನು ಶಾಸ್ತ್ರೀಯ ಭರತನಾಟ್ಯಕ್ಕೆ ಸ್ವತಂತ್ರವಾಗಿ ಅಳವಡಿಸುವಾಗ ಗಮಕ ಮತ್ತು ಶಾಸ್ತ್ರೀಯ ಸಂಗೀತದ ತುಲನಾತ್ಮಕ ಅಧ್ಯಯನ ನಡೆಸಿದ್ದೇನೆ ಎನ್ನುವ ಭ್ರಮರಿ ಅವರು ಈ ನೃತ್ಯಾವಿಷ್ಕಾರವನ್ನು ಭರತನಾಟ್ಯದ ಮಾರ್ಗ ಪದ್ಧತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.
“ಕುಮಾರವ್ಯಾಸ ಭಾರತವು ಸಂಪೂರ್ಣ ಷಟ್ಪದಿಯಲ್ಲಿ ರಚಿತವಾದ ಕಾವ್ಯ. ಅದನ್ನು ನೃತ್ಯಕ್ಕೆ ಅಳವಡಿಸುವುದೇನೂ ಸುಲಭವಿಲ್ಲ. ನೃತ್ಯದ ಬಂಧಗಳೇ ಬೇರೆ, ಕಾವ್ಯದ ವ್ಯಾಕರಣ, ಛಂದಸ್ಸುಗಳೇ ಬೇರೆ. ಭಾವ,ರಸಕ್ಕೆ ಭಂಗ ಬಾರದೇ ಭರತನೃತ್ಯಕ್ಕೆ ಕಾವ್ಯದ ಅಳವಡಿಕೆ ಅತ್ಯಂತ ಶ್ಲಾಘನೀಯ. ಕನ್ನಡದಲ್ಲಿ ಇಂಥ ಪ್ರಯತ್ನ, ಪ್ರಯೋಗ ಇನ್ನಷ್ಟು ನಡೆಯಬೇಕು. ಆಗ ಕಾವ್ಯ ಮತ್ತು ಶಾಸ್ತ್ರೀಯ ನೃತ್ಯಗಳು ಹೊಸ ಅನುಭಾವದೊಂದಿಗೆ ಹೊಸ ಪೀಳಿಗೆಗೆ ತಲುಪುತ್ತದೆ” ಎಂದು ಮೈಸೂರು ಗಾನಭಾರತಿ ಅಧ್ಯಕ್ಷೆ ಡಾ. ರಮಾ ವಿ. ಬೆಣ್ಣೂರು ಹೇಳಿದರು.
ಈ ಕಾವ್ಯ ನೃತ್ಯಾವಿಷ್ಕಾರ ಎರಡು ತಾಸುಗಳ ಏಕಾಂಗಿ ಪ್ರಯೋಗ. ಅತ್ಯಂತ ಅರ್ಥಗರ್ಭಿತವಾದ, ಛಂದೋವೈವಿಧ್ಯದ ಕಾವ್ಯಬಂಧವನ್ನು ನೃತ್ಯಬಂಧಕ್ಕೆ ಅಳವಡಿಸಿ ಸಂಪೂರ್ಣ ಕೃತಿಯ ಆಯ್ದ ನವರಸ ಭಾಗಗಳನ್ನು ಭ್ರಮರಿ ಪ್ರದರ್ಶಿಸಿದ್ದಾರೆ. ಭರತನಾಟ್ಯದ ಪುಷ್ಪಾಂಜಲಿ, ಸ್ವರಜತಿ, ಶಬ್ದಂ, ಪದವರ್ಣ, ಜಾವಳಿ, ತಿಲ್ಲಾನದೊಡನೆ ಅನಾವರಣಗೊಂಡ ಪ್ರದರ್ಶನ ಗೌರವದ ಪ್ರಶಂಸೆ ಪಡೆಯಿತು.
ಈ ರೀತಿಯ ಕಲಾಪ್ರದರ್ಶನ ನೀಡಬೇಕಿದ್ದರೆ ಸತತ ಅಧ್ಯಯನ, ಪರಿಶ್ರಮ, ಅಭ್ಯಾಸ ಮತ್ತು ಸಮರ್ಪಣಾ ಭಾವ ಅಗತ್ಯ. ಹೊಸ ಪೀಳಿಗೆಗೆ ಮಹಾಕಾವ್ಯ ಮತ್ತು ನೃತ್ಯದ ಶಾಸ್ತ್ರೀಯ ಮಹತ್ವ ತಿಳಿಸುವಲ್ಲಿ ಇಂಥ ಪ್ರಯೋಗಗಳು ಪರಿಣಾಮಕಾರಿಯಾಗಿದೆ.
ಖ್ಯಾತ ಗಮಕಿ ಚಂದ್ರಶೇಖರ ಕೆದ್ಲಾಯರು ಗಮಕದ ಜತೆ ನಿರೂಪಿಸಿದರೆ, ವಿದ್ವಾನ್ ಪಿ. ರಮೇಶ ಚಡಗ ಭರತನೃತ್ಯಕ್ಕೆ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಹಾಡಿದರು.