✍️ ಕಣಿಪುರ ವೆಬ್ ಡೆಸ್ಕ್
———————
ತ್ರಿಂಶತಿ ವರ್ಷಾಚರಣೆಯತ್ತ ತಲುಪಿರುವ ಜನಪ್ರಿಯ ಪೊಳಲಿ ಯಕ್ಷೋತ್ಸವ ಈ ಬಾರಿ ಅಕ್ಟೋಬರ್ 5 ರಂದು ಶನಿವಾರ ಆಹೋರಾತ್ರಿ ಜರಗಲಿದೆ. ಈ ಬಾರಿಯ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಹಿರಿಯ ವಿದ್ವಾಂಸ, ಖ್ಯಾತ ಅರ್ಥದಾರಿ ಡಾ. ಎಂ. ಪ್ರಭಾಕರ ಜೋಷಿ ಅವರಿಗೆ ಘೋಷಿತವಾಗಿದೆ. ಡಾ. ಜೋಷಿ ಯವರು ತಿಟ್ಟುಬೇಧವಿಲ್ಲದೇ ಕರಾವಳಿಯ ಯಕ್ಷಗಾನ ಕಲೆಗೆ ನೀಡಿದ ಕೊಡುಗೆ ಮಾನಿಸಿ ಪ್ರಶಸ್ತಿ ಸಲ್ಲುತ್ತದೆ.
ಈ ಬಾರಿ ಇವರಿಗೆ ಸನ್ಮಾನ
————————
ಪೊಳಲಿ ಯಕ್ಷೋತ್ಸವದಲ್ಲಿ ವರ್ಷಂಪ್ರತಿ ಯಕ್ಷಗಾನಕ್ಕೆ ಕೊಡುಗೆ ಇತ್ತವರನ್ನು ಮಾನಿಸುವುದು ಸಂಪ್ರದಾಯ. ಇದರಿಂದ ಬಹುತೇಕ ಸಾಧಕ ಕಲಾವಿದರಿಗೆ ಈಗಾಗಲೇ ಪೊಳಲಿಯ ಸನ್ಮಾನ ಗೌರವ ಸಂದಿದೆ. ಈ ಬಾರಿ ಅರ್ಥದಾರಿ ಶಂಭು ಶರ್ಮ ವಿಟ್ಲ, ಸುರೇಂದ್ರ ಮಲ್ಲಿ ಗುರುಪುರ, ಕೆ.ಎಚ್. ದಾಸಪ್ಪ ರೈ, ಸದಾಶಿವ ಕುಲಾಲ್ ವೇಣೂರು, ಶ್ರೀಧರ ಐತಾಳ್, ರವಿರಾಜ ಭಟ್ ಪನೆಯಾಲ, ಹಳುವಳ್ಳಿ ಗಣೇಶ ಭಟ್, ದಿನೇಶ ಶೆಟ್ಟಿ ಕಾವಳಕಟ್ಟೆ, ರವಿಶಂಕರ ವಳಕುಂಜ, ಮಾಧವ ಬಂಗೇರ ಕೊಳ್ತಮಜಲು, ಗುರುಪ್ರಸಾದ ಬೊಳಿಂಜಡ್ಕ ಸನ್ಮಾನಿತರಾಗಲಿದ್ದಾರೆ.
ಇದೇ ಸಂದರ್ಭ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಮತ್ತು ವಿನಾಯಕ ಯಕ್ಷಕಲಾ ಫೌಂಢೇಷನ್ ಕೆರೆಕಾಡು ಇವರಿಗೆ ಗೌರವಾರ್ಪಣೆ ನಡೆಯಲಿದೆ.
ಇತ್ತೀಚಿಗೆ ಅಗಲಿದ ಸುಬ್ರಹ್ಮಣ್ಯ ಧಾರೇಶ್ವರ, ಪೆರುವಾಯಿ ನಾರಾಯಣ ಶೆಟ್ಟಿ, ಕುಂಬ್ಳೆ ಶ್ರೀಧರ ರಾವ್, ಗಂಗಾಧರ ಜೋಗಿ ಪುತ್ತೂರು ಅವರ ಸಂಸ್ಮರಣೆ ಜರಗಲಿದೆ.
90 ಕಲಾವಿದರ ಮೇಳೈಕೆಯಲ್ಲಿ ಭರ್ಜರಿ ಬಯಲಾಟ
——————-
ಈ ಬಾರಿಯ ಯಕ್ಷೋತ್ಸವದಲ್ಲಿ ಸಂಜೆ 5ರಿಂದ ತುಳು ಯಕ್ಷರಂಗದಲ್ಲಿ ಕ್ರಾಂತಿ ಬರೆದ “ಕಚ್ಚೂರ ಮಾಲ್ದಿ” ಪ್ರಸಂಗ ಪ್ರದರ್ಶನವಾಗಲಿದೆ. ಒಂದು ಕಾಲದಲ್ಲಿ ಕರ್ನಾಟಕ ಮೇಳದಲ್ಲಿ ಮೆರೆದ ಈ ಪ್ರಸಂಗ ಮತ್ತೊಮ್ಮೆ ದಿನೇಶ ಅಮ್ಮಣ್ಣಾಯರ ಗಾನ ಸಾರಥ್ಯದಲ್ಲಿ ಕರ್ನಾಟಕ ಮೇಳವನ್ನು ನೆನಪಿಸುವಂತೆ ಪ್ರದರ್ಶನಗೊಳ್ಳಲಿದೆ.
ರಾತ್ರಿ 10ರಿಂದ ಭಾರತರತ್ನ ಪ್ರಸಂಗ ನಡೆಯಲಿದೆ. ತೆಂಕುತಿಟ್ಟಿನ ಪ್ರಸಿದ್ಧರಾದ 22 ಮಂದಿ ಹಿಮ್ಮೇಳ ಕಲಾವಿದರು, ಪ್ರತಿಭಾನ್ವಿತ ಹಿರಿ, ಕಿರಿಯರಾದ 67ವೇಷಧಾರಿಗಳು ಸೇರಿದಂತೆ ಸುಮಾರುವ 90 ಕಲಾವಿದರು ರಂಗ ಹಂಚುವ ಪೊಳಲಿ ಯಕ್ಷೋತ್ಸವಕ್ಕೆ ಕಲಾಭಿಮಾನಿಗಳು ವರ್ಷಂಪ್ರತಿ ಕಾಯುವುದು ವಾಡಿಕೆಯಾಗಿದೆ.
ಸಾರ್ವಜನಿಕ ದೇಣಿಗೆ ಎತ್ತದೇ ಪೊಳಲಿ ಆಸುಪಾಸಿನ ಕಲಾಭಿಮಾನಿಗಳ ದೈನಿಕ ಠೇವಣಿಯಿಂದಲೇ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರ ಮುಂಭಾಗ ನಡೆಯುವ ಈ ಯಕ್ಷೋತ್ಸವ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ವರ್ಷಂಪ್ರತಿ ಕುತೂಹಲ ಮೂಡಿಸುತ್ತಿದೆ.