ಕಣಿಪುರ ವೆಬ್ ಡೆಸ್ಕ್
ಕಾಸರಗೋಡು (ಆ. 29) : ಕೇರಳದ ಮಲಪ್ಪುರಂ ನಿಂದ ಕಾಸರಗೋಡಿಗೆ ಇ- ಸಿಗರೇಟ್ ಸಾಗಾಟ ಮಾಡುವ ಜಾಲ ಪತ್ತೆಯಾಗಿದ್ದು, 3ಸಾವಿರ ಇ-ಸಿಗರೇಟ್ ಮತ್ತು ಕಾರು ಸಹಿತ ಮಂಜೇಶ್ವರ ನಿವಾಸಿಗಳಾದ ಇಬ್ಬರನ್ನು ಕಾಸರಗೋಡು ನಗರದಿಂದ ಬಂಧಿಸಲಾಗಿದೆ.
ಗುರುವಾರ ಬೆಳಿಗ್ಗೆ ನಗರದ ಚಂದ್ರಗಿರಿ ರಸ್ತೆಯ ಜಂಕ್ಷನ್ ನಲ್ಲಿ ಟಯರ್ ಬದಲಾಯಿಸುತ್ತಿದ್ದ ಕಾರೊಂದನ್ನು ಶಂಕಿತ ಹಿನ್ನೆಲೆಯಲ್ಲಿ ವಿಚಾರಿಸಿದಾಗ ಜಾಲ ಬೆಳಕಿಗೆ ಬಂದಿದೆ. ಬಂಧಿತರು ಮಂಜೇಶ್ವರ ನಿವಾಸಿಗಳಾದ ಮುಹಮ್ಮದ್ ಶೆರೀಫ್, ಮುಹಮ್ಮದ್ ಬಶೀರ್ ಎಂಬಿವರಾಗಿದ್ದಾರೆ.
ಪೋಲೀಸರು ನಗರದಲ್ಲಿ ಗಸ್ತು ತಿರುಗಾಟ ಮಾಡುವ ವೇಳೆ ನಿಲ್ಲಿಸಿದ್ದ ಕಾರೊಂದರ ಟಯರನ್ನು ಇಬ್ಬರು ಬದಲಾಯಿಸುತ್ತಿದ್ದರು. ಅವರ ಆತುರದ ವರ್ತನೆ ಗಮನಿಸಿ ಪೋಲೀಸರು ಬಳಿಗೆ ಹೋದಾಗ ಅವರು ಮತ್ತಷ್ಟು ಆತಂಕಿತರಾದುದನ್ನು ಗಮನಿಸಿ ವಿಚಾರಣೆ ಮಾಡಿದಾಗ ಕಾರಿನಿಂದ ಇ – ಸಿಗರೇಟ್ ಪತ್ತೆಯಾಗಿದೆ. ಇದು ಮಲಪ್ಪುರದಿಂದ ಮಂಜೇಶ್ವರಕ್ಕೆ ಸಾಗಿಸುವ ಉದ್ದೇಶದಿಂದ ತಂದಿರುವುದಾಗಿ ಬಂಧಿತರು ಪೋಲೀಸರಲ್ಲಿ ಹೇಳಿದ್ದಾರೆ.
ಇತ್ತೀಚಿಗೆ ಬಂದ್ಯೋಡಿನ ಅಂಗಡಿಯೊಂದರಿಂದ 6 ಇ-ಸಿಗರೇಟ್ ಸಹಿತ ಇಬ್ಬರನ್ನು ಬಂಧಿಸಲಾಗಿತ್ತು. ಈ ವೇಳೆ ಕಾಸರಗೋಡು ಭಾಗದಲ್ಲಿ ಇ-ಸಿಗರೇಟ್ ದಂಧೆ ನಡೆಯುತ್ತಿರುವ ಮಾಹಿತಿ ಪೋಲೀಸರ ಗಮನಕ್ಕೆ ಬಂದಿತ್ತು. ಆಧುನಿಕ ತಲೆಮಾರಿನ ಯುವ ಜನತೆಯಲ್ಲಿ ಇ-ಸಿಗರೇಟ್ ಸೇವನೆ ಚಟವಾಗುತ್ತಿದ್ದು, ಜಿಲ್ಲೆಗೆ ಇದು ಎಲ್ಲಿಂದ ಪೂರೈಕೆಯಾಗುತ್ತದೆಂದು ತಿಳಿದಿರಲಿಲ್ಲ.
ಇ-ಸಿಗರೇಟೆಂದರೇನು?
———————-
ಇ- ಸಿಗರೇಟು ಎಂದರೆ ಸಾಮಾನ್ಯ ಸಿಗರೇಟನ್ನೇ ಹೋಲುವ ತಂಬಾಕು ಬಳಸದ ವಸ್ತು. ಇದನ್ನು ವೇಬ್ಸ್, ವೇಪ್ ಪೆನ್, ಹುಕ್ಕಾಪೆನ್, ಇ-ಸಿಗಾರ್, ಇ-ಪೈಪ್ ಎಂಬಿತ್ಯಾದಿಯಾಗಿ ಕರೆಯುತ್ತಾರೆ.
ಇದರಲ್ಲಿಯೂ ನಿಕೋಟಿನ್ ಅಂಶವಿದ್ದರೂ ಇದು ಇಲೆಕ್ಟ್ರಾನಿಕ್ ಬ್ಯಾಟರಿ ಚಾಲಿತ ವಸ್ತು. ಇದು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದು ಶ್ವಾಸಕೋಶಕ್ಕೆ ಹಾನಿಕಾರಕವಾಗಿದೆ. ಪ್ರಸ್ತುತ ಸಿಗರೇಟನ್ನು ಭಾರತದಲ್ಲಿ 2019ರಲ್ಲಿ ನಿಷೇಧಿಸಲಾಗಿದೆ.