ಯಕ್ಷಗಾನ ಪ್ರೇಕ್ಷಕರು ಪಂಡಿತರಂತೆ ವಿಮರ್ಶಿಸುವುದೇ ಸಮಸ್ಯೆ..!

ವಿಮರ್ಶೆ ಎಂದರೆ ಹೊಗಳುವುದು, ತೆಗಳುವುದೋ ಅಲ್ಲ

by admin

ಕಣಿಪುರ ವೆಬ್ ಡೆಸ್ಕ್
ಯಕ್ಷಗಾನದಲ್ಲಿ ಬದಲಾವಣೆ ಬೇಕೋ ಬೇಡವೋ..? ಇದು ಕಾಲಾನುಕಾಲದ ಚರ್ಚೆ. ನಮ್ಮ ನಿತ್ಯ ಬದುಕಿನ ಜನಜೀಚನದಲ್ಲೇ ಸಾಕಷ್ಟು ಬದಲಾವಣೆ ಸಂಭವಿಸುತ್ತಲೇ ಇದೆ ಮತ್ತು ಆ ಬದಲಾವಣೆಗಳಿಗೆ ನಾವು ಒಗ್ಗಿಕೊಂಡಿದ್ದೇವೆ. ಆದರೆ ಯಕ್ಷಗಾನ ರಂಗಭೂಮಿಯ ವಿಚಾರ ಬಂದಾಗ ಏಕಾಏಕಿ ಕಲೆಯ ಔಚಿತ್ಯ ಅರಿಯದೇ, ಕಲಾ ಪ್ರೌಢಿಮೆಗಳಿಲ್ಲದೇ ಟೀಕಿಸುವುದು ಖಂಡಿತಾ ಸರಿಯಲ್ಲ. ಬದಲು ವಿಮರ್ಶೆಗಳು ಸ್ವಾಗತಾರ್ಹ. ವಿಮರ್ಶೆ ಎಂದರೆ ಬೈಯ್ಯುವುದೋ, ಅತಿರೇಕದಿಂದ ಹೊಗಳುವುದೋ ಎರಡೂ ಅಲ್ಲ. ವಿಮರ್ಶೆಗೂ ಕಲಾ ಮೀಮಾಂಸೆಯ ಅರಿವಿನ ಮಾನದಂಡಗಳಿವೆ. ಅದೇನೂ ಅರಿಯದೇ ಯಕ್ಷಗಾನದ ವಿಚಾರದಲ್ಲಿ ಎಲ್ಲರೂ ಪಂಡಿತರAತೆ ಮಾತಾಡುವುದೇ ಸಮಸ್ಯೆ ಎಂದಿದ್ದರು ಅಗಲಿದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ.

                                                                                                                                          ವರ್ಷದ ಹಿಂದೆ ಉಡುಪಿ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ನಡೆದ ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶದಲ್ಲಿ ಆಯೋಜನೆಗೊಂಡ ಯಕ್ಷಗಾನ ಗೋಷ್ಟಿಯಲ್ಲಿ ಮಾತಾಡಿದ ಅವರು ಯಕ್ಷಗಾನದ ಪ್ರೇಕ್ಷಕರು ಕೂಡಾ ಕಲೆಯನ್ನು ಅರಿತು ಮಾತಾಡುವವರಾಗಬೇಕು ಎಂದರು. ವರ್ತಮಾನದ ಭಾಗವತಿಕೆಯ ವಿಚಾರವನ್ನೇ ಹೇಳುವುದಾದರೆ ಪೌರಾಣಿಕ ಪ್ರಸಂಗಗಳಲ್ಲಿ ನಾವು ಅನೇಕ ರಾಗಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕೆಲವು ರಾಗಗಳೇ ನಷ್ಟವಾಗುತ್ತಿದೆ. ಉದಾಹರಣೆಗೆ ಭೀಷ್ಮ ವಿಜಯದ “ಕರುಣ ನಿಧಿ ಅವತರಿಸು ಸರ್ವಜ್ಞ ನೀನು” ಪದ್ಯವನ್ನು ಕಾಂಬೋಧಿ ಜಂಪೆಯಲ್ಲಿ ಗುರು ಉಪ್ಪೂರರಿಂದ ಕಲಿತಿದ್ದೆ. ಅದನ್ನೇ ಅನುಸರಿಸಿ ಹಾಡುತ್ತಿದ್ದೆ. ಉಪ್ಪೂರರಲ್ಲಿ ನನಗೆ ಜತೆಯಾಗಿದ್ದ ಕಾಳಿಂಗ ನಾವಡರು, ಕಡತೋಕರು ಹಾಗೆಯೇ ಹಾಡುತ್ತಿದ್ದರು. ಈಗ ಅದನ್ನು ಹಾಡುವುದೇ ಇಲ್ಲ. ಈಗಿನವರು ಹಾಡುವ ವಿಧಾನವೇ ಬದಲಾಗಿದೆ. ಈ ಗಾಯನ ಕ್ರಮ ಸೂಕ್ತವೋ, ಅಗತ್ಯವೋ, ಬೇಡವೋ..?
ಪ್ರಾಜ್ಞರೇ ಹೇಳಬೇಕು. ಹೀಗೆ ಅನೇಕ ಪದ್ಯಗಳನ್ನು ಹಾಡುವ ಕ್ರಮಗಳೇ ಬದಲಾಗಿವೆ. ಇದು ಸರಿಯೋ, ತಪ್ಪೋ? ಇದಕ್ಕುತ್ತರಿಸಲು ನನ್ನಿಂದಾಗದು. ಇದಕ್ಕೆ ವಿಮರ್ಶಕರೇ ಉತ್ತರಿಸಬೇಕು ಎಂದು ಆಹ್ವಾನಿಸಿದ್ದರು ಧಾರೇಶ್ವರ ಭಾಗವತರು.


ತಾನು ಹಾಡುವ ರಾಗ ಯಾವುದು? ಅದರ ಸ್ಥಾಯೀಭಾವದ ರಸ ಏನು ಎಂಬುದು ಭಾಗವತನಿಗೆ ನಿಖರವಾಗಿ ಗೊತ್ತಿರಬೇಕು. ಯಾವ ರಾಗವನ್ನು ಎಲ್ಲಿ, ಯಾವ ಸಂದರ್ಭದಲ್ಲಿ ಬಳಸಬೇಕೆಂಬ ಔಚಿತ್ಯ ಪ್ರಜ್ಞೆ ಭಾಗವತ ಅರಿತಿರಲೇಬೇಕು. ಔಚಿತ್ಯ ಅರಿಯದೇ ತನಗೆ ಗೊತ್ತುಂಟು ಎಂಬ ಮಾತ್ರಕ್ಕೆ ಅನಪೇಕ್ಷಣೀಯ ಜಾಗದಲ್ಲಿ ಸಿಕ್ಕ ಸಿಕ್ಕ ರಾಗಗಳನ್ನೆಲ್ಲಾ ಬಳಸಕೂಡದು ಎಂದಿದ್ದರು ಧಾರೇಶ್ವರ ಭಾಗವತರು. ಭಾಗವತ ಎಂದರೆ ಕೇವಲ ಹಾಡುಗಾರನಲ್ಲ. ಪ್ರಸಂಗದ ಸಮಗ್ರ ಚಿತ್ರಕಲ್ಪನೆಯುಳ್ಳ ರಂಗತಂತ್ರಜ್ಞ. ಪಾತ್ರದ ಪರಿಕಲ್ಪನೆ, ಪ್ರಸ್ತುತಿಯ ವಿನ್ಯಾಸ, ಪದ್ಯದ ಸಾಹಿತ್ಯ ಜ್ಞಾನ, ಅಕ್ಷರ ಸ್ಪುಟತೆ, ಪದ್ಯಗಳ ಪರಿಧಿ ಮತ್ತು ಅರ್ಥದ ಪರಿಕಲ್ಪನೆಗಳು ಗೊತ್ತಿರಲೇಬೇಕು. ಆದ್ದರಿಂದಲೇ ಭಾಗವತರನ್ನು ರಂಗದ ನಿರ್ದೇಶಕ ಎನ್ನುವುದು. ಇಂದು ಏನಾಗುತ್ತಿದೆ ಎಂಬುದು ನನಗಿಂತ ಹೆಚ್ಚು ನಿಮಗೆ ಗೊತ್ತಿದೆ ಎಂದು ನಿಟ್ಟುಸಿರಿಟ್ಟಿದ್ದರು ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00