ಕಣಿಪುರ ಸುದ್ದಿಜಾಲ
———————-
ಜಗತ್ತಿಗೆ ತುಳುನಾಡಿನ ಕೊಡುಗೆಯಾದ ಅತ್ಯಂತ ಪ್ರಾಚೀನ ಸಮರಕಲೆ ‘ಕಳರಿಪಯಟ್ಟ್’ ಕರಗತ ಮಾಡುವುದರಲ್ಲಿ ನಿರತರಾಗಿ ಅಚ್ಚರಿ ಮೂಡಿಸಿದ್ದಾರೆ. ರಾಷ್ಟಷ್ರಪ್ರಶಸ್ತಿ ವಿಜೇತ ‘ಕಾಂತಾರ’ದ ನಟ, ನಿರ್ದೇಶಕ ಋಷಭ್ ಶೆಟ್ಟಿ. ಇದೀಗ ಚಿತ್ರೀಕರಣವಾಗುತ್ತಿರುವ ಕಾಂತಾರ-೨’ ಚಿತ್ರದಲ್ಲಿ ಅವರು ಸಮರಕಲೆ ‘ಕಳರಿಪಯಟ್ಟ್’ ನೊಂದಿಗೆ ಕಾಣಿಸಿಕೊಳ್ಳುವರು. ತನ್ಮೂಲಕ ತುಳುನಾಡಿಂದಲೇ ಕಣ್ಮರೆಯಾಗಿರುವ ನೆಲಮೂಲದ ಸಮರಕಲೆಯನ್ನು ಮತ್ತೆ ಈ ನೆಲಕ್ಕೆ ತೋರಿಸಿಕೊಡುವ ಸಾಹಸದಲ್ಲವರು ನಿರತರಾಗಿದ್ದಾರೆ. ಇದು ಋಷಭ್ ಅಭಿಮಾನಿಗಳ ಸಹಿತ ಎಲ್ಲರಲ್ಲೂ ಕೌತುಕ ಸೃಷ್ಟಿಸಿದೆ.
ತುಳುನಾಡಿನಲ್ಲಿ ಶತಮಾನಗಳ ಹಿಂದೆ ತೌಳವ ಅರಸೊತ್ತಿಗೆ ಮೆರೆಯುವ ಕಾಲಕ್ಕೆ ಅನೇಕ ಗರಡಿಗಳಿದ್ದುವು. ಇಲ್ಲಿ ವಿಶೇಷ ಶಾರೀರಿಕ ಪಳಗುವಿಕೆಯ ನೃತ್ಯ ಶೈಲಿಯ ಕತ್ತಿವರಸೆ ವಿದ್ಯೆಯನ್ನು ಗುರುಕುಲ ಮಾದರಿಯಲ್ಲಿ ಕಲಿಸಿಕೊಡುವ ಸಂಪ್ರದಾಯಗಳಿತ್ತು. ಆ ಕಾಲಕ್ಕೆ ಕೇರಳದ ಪ್ರಾದೇಶಿಕ ರಾಜ ಮನೆತನದವರು ತುಳುನಾಡಿನ ಗರಡಿಗೆ ಬಂದು ಈ ಸಮರಕಲೆಯಲ್ಲಿ ವಿಶೇಷ ಪರಿಣತಿ ಪಡೆಯುತ್ತಿದ್ದರು. ಈ ದಾಖಲಾತಿಗಳು ಅಂದಿನ ಕಾಲದ ಕೇರಳದ ‘ವಡಕ್ಕನ್ ಪಾಟ್ಟ್’ (ಜನಪದ ಹಾಡು) ಗಳಲ್ಲಿವೆ. ಆದರೆ ತುಳುನಾಡಿನಲ್ಲಿ ತೌಳವ ಅರಸೊತ್ತಿಗೆ ನಾಶವಾಗುವುದರೊಂದಿಗೆ ಈ ಸಮರಕಲೆಯೂ ನಾಶವಾಗಿದೆ. ಆದರೆ ಕೇರಳದಲ್ಲಿ ಇದು ಪ್ರಾಚೀನ ಯುದ್ಧಕಲೆಯೆಂಬ ಆರಾಧನೆಯೊಂದಿಗೆ ಈಗಲೂ ಕಳರಿಪಯಟ್ಟ್ ಪ್ರಸಿದ್ಧವಾಗಿಯೇ ಚಾಲ್ತಿಯಲ್ಲಿದೆ.
ಕಳರಿ’ ಎಂದರೆ ಗರಡಿ ಎಂದರ್ಥ. ‘ಪಯಟ್ಟ್’ ಎಂದರೆ ಹೋರಾಟ ಎಂಬರ್ಥ. ಪ್ರಪಂಚದಲ್ಲೇ ಯುದ್ಧ ವಿದ್ಯೆಗೆ ಕಲೆಯನ್ನು ಬಳಸಿದ ಮೊದಲಿಗರು ತುಳುನಾಡಿನವರು. ಈಗ ತುಳುನಾಡಲ್ಲಿ ಈ ಸಮರಕಲೆ ಅಳಿದಿದೆಯಾದರೂ ಜಗತ್ತಿಗೆ ಇದು ಪಸರಿಸಿದೆ. ಕೇರಳದ ಪಾರಂಪರಿಕ ಸಮರಕಲೆಯೆಂದೇ ಬಿಂಬಿತವಾಗಿದೆ. ಇಂಥ ಸಮರಕಲೆಯಲ್ಲಿ ಕತ್ತಿ, ಗುರಾಣಿ ಹಿಡಿದು ಕಾದಾಡುವ ಚಿತ್ರವೊಂದನ್ನು ಋಷಭ್ ಶೆಟ್ಟಿ ತಮ್ಮ ಇನ್ಸ್ಟಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ‘ಕಾಂತಾರ-೨’ ಚಿತ್ರದ ಕುರಿತಾಗಿ ಜನರಲ್ಲಿ ಕೌತುಕದ ನಿರೀಕ್ಷೆ ಮೂಡಿಸಿದೆ. ಕೇವಲ ಕರ್ನಾಟಕವಲ್ಲದೇ ಕೇರಳದಲ್ಲೂ ‘ಕಳರಿಪಯಟ್ಟ್’ ಕಲಿಯುವ ಋಷಭ್ ಕುರಿತು ಕೌತುಕದ ಸುದ್ದಿಯಾಗಿದೆ.
೯೦ರ ದಶಕದಲ್ಲಿ ಮಮ್ಮುಟ್ಟಿ ಅಭಿನಯದ ‘ವಡಕ್ಕನ್ ವೀರಗಾಥ’ ಎಂಬ ಸಿನಿಮಾದಲ್ಲಿ ಸ್ವತಃ ಮಮ್ಮುಟ್ಟಿ ‘ಕಳರಿಪಯಟ್ಟ್’ ಎಂಬ ಕತ್ತಿ ಕಾಳಗ ನಡೆಸುವುದನ್ನು ಕಲಾತ್ಮಕ ವಾಗಿ ತೋರಿಸಲಾಗಿತ್ತು. ಅದಾಗಿ ೩೦ವರ್ಷಗಳ ಬಳಿಕ ಕನ್ನಡದಲ್ಲಿ ಇದೇ ಮೊದಲಬಾರಿಗೆ ಕನ್ನಡ ನಾಡಿನ ನೆಲಮೂಲದ ಕಲೆಯೊಂದರತ್ತ ಸಿನಿಮಾ ದೃಷ್ಟಿ ಬಿದ್ದಿದೆ. ತನ್ನ ಚಿತ್ರಗಳಲ್ಲಿ ತಾನು ‘ಭಾರತೀಯ ಪರಂಪರೆಯ ಅಸ್ಮಿತೆಯನ್ನು ತೋರಿಸುವೆ’ ಎಂದು ಋಷಭ್ ಶೆಟ್ಟಿ ಸುಮ್ಮನೆ ಹೇಳಿದ್ದಲ್ಲ. ಮೊದಲ ‘ಕಾಂತಾರ’ ದಲ್ಲಿ ಕಂಬಳದ ಕೋಣ ಓಡಿಸಿ, ದೈವವೇ ದೇಹಕ್ಕೆ ಆವಾಹನೆಯಾದುದನ್ನು ಅದ್ಭುತವಾಗಿ ಪ್ರದರ್ಶಿಸಿ, ರಾಷ್ಟ್ರಪ್ರಶಸ್ತಿ ಮುಡಿದರೆ, ಇದೀಗ ಚಿತ್ರೀಕರಣ ಹಂತದಲ್ಲಿರುವ ಕಾಂತಾರ-೨ನಲ್ಲಿ ‘ಕಳರಿಪಯಟ್ಟ್’ ಮಾಡುವ ಕತ್ತಿವರಸೆಯ ಯೋಧನಾಗಿ ನಮ್ಮ ನೆಲದ ಪೂರ್ವ ಸಂಸ್ಕೃತಿಗೆ ಅವರು ಮುಖವಾಗುತ್ತಿದ್ದಾರೆ.